ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಅಭಿಮಾನಿಯೊಬ್ಬರು ಹಿಡಿದಿರುವ ಪಾಕಿಸ್ತಾನ ಧ್ವಜದ ಮೇಲೆ ಹಸ್ತಾಕ್ಷರ ಹಾಕುತ್ತಿರುವ ಫೋಟೊವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಅವರು ಹಸ್ತಾಕ್ಷರ ನೀಡುತ್ತಿರುವುದಾಗಿ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಆದರೆ, ಇದು ಸುಳ್ಳು.
ರಿವರ್ಸ್ ಇಮೇಜ್ ವಿಧಾನದಲ್ಲಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಅಕ್ಟೋಬರ್ 16ರಂದು ಎನ್‌ಡಿಟಿವಿಯಲ್ಲಿ ಪ್ರಕಟವಾದ ಲೇಖನವೊಂದು ಸಿಕ್ಕಿತು. ಅದರಲ್ಲಿ ಕೊಹ್ಲಿ ಅವರು ಹಸ್ತಾಕ್ಷರ ಹಾಕುವ ಮೂಲ ಫೋಟೊ ಇದೆ. ಆದರೆ, ಅದರಲ್ಲಿ ಆರ್‌ಸಿಬಿ ಜೆರ್ಸಿಯ ಮೇಲೆ ಹಸ್ತಾಕ್ಷರ ಹಾಕುತ್ತಾರೆಯೇ ವಿನಾ ಪಾಕಿಸ್ತಾನದ ಧ್ವಜದ ಮೇಲಲ್ಲ. ಆ ಲೇಖನದ ಪ್ರಕಾರ, ಕರಾಚಿಯಿಂದ ಬಂದಿದ್ದ ಅಭಿಮಾನಿ ಸಾಹಿಲ್ ಎನ್ನುವವರಿಗೆ ಕೊಹ್ಲಿ ಹಸ್ತಾಕ್ಷರ ನೀಡಿದ್ದಾರೆ. ‘ರೆವ್‌ಸ್ಪೋರ್ಟ್ಸ್‌ಗ್ಲೋಬಲ್’ ಮಾಧ್ಯಮದಲ್ಲಿ ಬಂದ ಮಾಹಿತಿಯನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೊಹ್ಲಿ ಅವರು ಜೆರ್ಸಿಗೆ ಹಸ್ತಾಕ್ಷರ ಹಾಕುತ್ತಿರುವ ವಿಡಿಯೊ ತುಣಕನ್ನೂ ರೆವ್‌ಸ್ಪೋರ್ಟ್ಸ್‌ಗ್ಲೋಬಲ್‌ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಚಿತ್ರದ ಬಗ್ಗೆ ಅನುಮಾನ ಬಂದು ಚಿತ್ರವನ್ನು ಸೈಟ್‌ಎಂಜಿನ್ ಮತ್ತು ಅನ್‌ಡಿಟೆಕ್ಟೆಬಲ್ ಎಐ ಟೂಲ್‌ಗಳ ಮೂಲಕ ಪರಿಶೀಲಿಸಿದಾಗ ಅದು ಡಿಜಿಟಲ್ ತಂತ್ರಜ್ಞಾನದಲ್ಲಿ ತಿರುಚಿ, ಎಐ ಬಳಸಿ ತಯಾರಿಸಿದ ಚಿತ್ರ ಎಂಬುದಕ್ಕೆ ಸುಳಿವುಗಳು ಸಿಕ್ಕವು. ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿರುವುದು ಮೂಲಚಿತ್ರವಲ್ಲ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.