ADVERTISEMENT

ಅಂಗಾಂಗ ದಾನಿಗಳಿಗೆ ಮಾಹಿತಿ ನೀಡಿ- ಕೋರ್ಟ್

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 19:30 IST
Last Updated 19 ಆಗಸ್ಟ್ 2012, 19:30 IST

ನವದೆಹಲಿ (ಐಎಎನ್‌ಎಸ್):  `ಶಸ್ತ್ರಚಿಕಿತ್ಸೆಯ ನಂತರ ಎದುರಿಸಬಹುದಾದ ಪರಿಣಾಮಗಳ ಬಗ್ಗೆ ಅಂಗಾಂಗ ದಾನಿಗಳಿಗೆ ಸಂಪೂರ್ಣ ಮಾಹಿತಿ ಇರಬೇಕು~ ಎಂದು ದೆಹಲಿ ಹೈಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಹೇಳಿದೆ.

`ದಾನಿಗಳಿಗೆ ಸರಿಯಾದ ಮಾಹಿತಿ ನೀಡದಿದ್ದರೆ ಇಡೀ ಪ್ರಕ್ರಿಯೆ ಕುಲಗೆಡುವ ಅಪಾಯ ಇರುತ್ತದೆ~ ಎಂದು ಪಿತ್ತಕೋಶ ದಾನ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ರಾಜೀವ್ ಶಕ್‌ಧರ್ ಹೇಳಿದ್ದರು.
ತಾವು ಅಂಗಾಂಗ ದಾನ ಪಡೆಯುವುದಕ್ಕೆ ಅನುಮತಿ ನೀಡದ ಆಸ್ಪತ್ರೆಯ ನಿರ್ಧಾರವನ್ನು ಪ್ರಶ್ನಿಸಿ 62 ವರ್ಷದ ಊರ್ಮಿಳಾ ಆನಂದ್ ಹೈಕೋರ್ಟ್ ಮೊರೆ ಹೋಗಿದ್ದರು.

 ಆಗ್ರಾದ ಊರ್ಮಿಳಾ, ಪಿತ್ತಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇಲ್ಲಿನ ಅಪೊಲೊ ಇಂದ್ರಪ್ರಸ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರವೇ ಬದಲಿ ಪಿತ್ತಕೋಶ ಜೋಡಣೆ ಮಾಡುವುದಾಗಿ ವೈದ್ಯರು ಭರವಸೆ ನೀಡಿದ್ದರು. ಸುಮಾರು 30 ವರ್ಷಗಳಿಂದ ಇವರ ಕುಟುಂಬಕ್ಕೆ ಆಪ್ತರಾಗಿರುವ ಗುಲಾಬ್ ದೇವಿ ಅವರು ಊರ್ಮಿಳಾಗೆ ತಮ್ಮ ಪಿತ್ತಕೋಶದ ಭಾಗವನ್ನು ದಾನ ಕೊಡಲು ಮುಂದಾಗಿದ್ದರು. ಆದರೆ ಇವರಿಬ್ಬರ ಮಧ್ಯೆ ಆರ್ಥಿಕ ಅಸಮಾನತೆ ಇದೆ ಎಂಬ ಕಾರಣಕ್ಕೆ ಆಸ್ಪತ್ರೆಯು ಅಂಗಾಂಗ ದಾನಕ್ಕೆ ಅವಕಾಶ ಕೊಟ್ಟಿರಲಿಲ್ಲ.

ಇದನ್ನು ಪ್ರಶ್ನಿಸಿ ಊರ್ಮಿಳಾ ಅವರ ಮಗ ಆರೋಗ್ಯ ಸೇವಾ ಮಹಾ ನಿರ್ದೇಶನಾಲಯ (ಡಿಜಿಎಚ್‌ಎ)ದ ಮೊರೆ ಹೋಗಿದ್ದರು. ಆದರೆ ಅದು ಆಸ್ಪತ್ರೆಯ ನಿರ್ಧಾರವನ್ನು ಎತ್ತಿಹಿಡಿದಿತ್ತು. ಆಗ ಅವರು ಹೈಕೋರ್ಟ್ ಮೊರೆ ಹೋಗಬೇಕಾಯಿತು.

`ಶಸ್ತ್ರಚಿಕಿತ್ಸೆಯ ನಂತರ ಆಗಬಹುದಾದ ಪರಿಣಾಮಗಳ ಬಗ್ಗೆ ಅಂಗಾಂಗ ದಾನಿಗೆ ಆಸ್ಪತ್ರೆಯು ಮಾಹಿತಿ ನೀಡಬೇಕು~ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.

`ತುರ್ತು ಸಂದರ್ಭಗಳಲ್ಲಿ ಅಗತ್ಯವಿದೆ~
`ತುರ್ತು ಪ್ರಕರಣಗಳಲ್ಲಿ ಆದಷ್ಟು ಶೀಘ್ರ ಬದಲಿ ಅಂಗಾಂಗ ಜೋಡಣೆ ಮಾಡಬೇಕಾಗುತ್ತದೆ. ಕೇಂದ್ರ ಸಚಿವ ವಿಲಾಸ್ ರಾವ್ ದೇಶ್‌ಮುಖ್ ಅವರಿಗೆ ಪಿತ್ತಕೋಶ ಹಾಗೂ ಮೂತ್ರಕೋಶ ಜೋಡಣೆ ಮಾಡಬೇಕಿತ್ತು.  ಸಕಾಲಕ್ಕೆ ದಾನಿಗಳು ಸಿಗದ ಕಾರಣ ಅವರು ಮೃತಪಟ್ಟರು~ ಎಂದು ಊರ್ಮಿಳಾ ಅವರ ವಕೀಲ ಜಿತೇಂದ್ರ ಸೇಥಿ ಹೇಳುತ್ತಾರೆ.

`ಗುಲಾಬ್ ದೇವಿ ಅವರು ಊರ್ಮಿಳಾ ಮೇಲಿನ ಪ್ರೀತಿಯಿಂದಾಗಿ ಸ್ವಇಚ್ಛೆಯಿಂದ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ರೋಗಿ ಹಾಗೂ ದಾನಿಯ ಬಾಂಧವ್ಯವನ್ನು ರುಜುವಾತು ಪಡಿಸಲು ನಾವು 30 ವರ್ಷಗಳ ಹಿಂದೆ ತೆಗೆದ ಕುಟುಂಬದ ಭಾವಚಿತ್ರಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದೇವೆ~ ಎಂದೂ ಅವರು ಹೇಳಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.