ADVERTISEMENT

ಅಂಚೆ ಕಚೇರಿಗಳಲ್ಲಿನ್ನು ಬ್ಯಾಂಕ್ ಸೇವೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 6:20 IST
Last Updated 3 ಜನವರಿ 2012, 6:20 IST

ನವದೆಹಲಿ, (ಪಿಟಿಐ): ಬ್ಯಾಂಕಿಂಗ್  ಸೌಲತ್ತು ಪಡೆಯದ ಬಹುತೇಕವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸಿರುವ ಜನತೆಗೆ ಇದೇ ವರ್ಷದಲ್ಲಿ  ಸಕಲ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಮಹಾತ್ವಾಕಾಂಕ್ಷಿ ಯೋಜನೆಯೊಂದನ್ನು ಕೇಂದ್ರ ಸರ್ಕಾರ ರೂಪಿಸುತ್ತಿದ್ದು, ಅದಕ್ಕಾಗಿ ದೇಶದಾದ್ಯಂತ ವ್ಯಾಪಕವಾಗಿ ಹರಡಿರುವ ಪೋಸ್ಟ್ ಆಫೀಸುಗಳ ಜಾಲವನ್ನು ಬಳಸಲು ಉದ್ದೇಶಿಸಲಾಗಿದೆ.  ಈ ಸಂಬಂಧ ಹಣಕಾಸು ಸಚಿವಾಲಯಕ್ಕೆ  ಈಗಾಗಲೇ ಪ್ರಸ್ತಾವನೆಯೊಂದನ್ನು ಕಳುಹಿಸಲಾಗಿದೆ.

ಸರ್ಕಾರದ ಉದ್ದೇಶಿತ ಈ ಯೋಜನೆಯಲ್ಲಿ 1.55 ಲಕ್ಷ ಅಂಚೆ ಕಚೇರಿಗಳಲ್ಲಿ ಜನತೆಗೆ ಬ್ಯಾಂಕಿಂಗ್ ಸೌಲಭ್ಯ ಸಿಗಲಿದೆ. ಇದರೊಂದಿಗೆ ದೇಶದಲ್ಲಿನ ಬ್ಯಾಂಕಿಂಗ್ ಸೇವೆ ಮೂರು ಪಟ್ಟು ಹೆಚ್ಚಾದಂತಾಗುತ್ತದೆ. ಗ್ರಾಮೀಣ ಜನತೆಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ.

ದೇಶದಲ್ಲಿ ಒಟ್ಟು 87,000 ಬ್ಯಾಂಕ್ ಶಾಖೆಗಳಿದ್ದರೆ, ಅವುಗಳಲ್ಲಿ ಕೇವಲ 24,000 ಶಾಖೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಆದರೆ ದೇಶದ ಶೇಕಡಾ 90 ರಷ್ಟು ಅಂಚೆ ಕಚೇರಿಗಳು ಗ್ರಾಮಾಂತರ ಪ್ರದೇಶದಲ್ಲಿರುವುದು ಗಮನಾರ್ಹ. ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಅಂಚೆ ಕಚೇರಿ ಜಾಲ ಪಡೆದ ಹೆಗ್ಗಳಿಕೆ ಹೊಂದಿರುವ ಭಾರತದಲ್ಲಿ 1.4 ಲಕ್ಷ ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶಗಳಲ್ಲಿಯೇ ಇವೆ.

ADVERTISEMENT

ಈ ಮಹಾತ್ವಾಕಾಂಕ್ಷಿ ಯೋಜನೆ ಕುರಿತು  ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಾಲ್ ಅವರು ಕಳೆದ ಜುಲೈ ತಿಂಗಳಲ್ಲೇ ಚಿಂತನೆಯನ್ನು ಆರಂಭಿಸಿ ಅದಕ್ಕೊಂದು ಸ್ಥಫಲವಾದ ರೂಪರೇಷೆ ನೀಡಿದ್ದರು. ಈ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿ ಬ್ಯಾಂಕಿಂಗ್ ಮತ್ತು ಅಂಚೆ ಸೇವೆಗಳ ಕುರಿತು ಈಗಾಗಾಲೇ ಚಾಲ್ತಿಯಲ್ಲಿರುವ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕಿದೆ. ಈ ನಿಟ್ಟಿನ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಹಿರಿಯ ಅಧಿಕಾರಿಗಳೊಬ್ಬರು  ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.