ADVERTISEMENT

ಅಂಚೆ ಠೇವಣಿಗೂ ಆಧಾರ್‌ ಕಡ್ಡಾಯ

ಪಿಟಿಐ
Published 6 ಅಕ್ಟೋಬರ್ 2017, 19:44 IST
Last Updated 6 ಅಕ್ಟೋಬರ್ 2017, 19:44 IST
ಅಂಚೆ ಠೇವಣಿಗೂ ಆಧಾರ್‌ ಕಡ್ಡಾಯ
ಅಂಚೆ ಠೇವಣಿಗೂ ಆಧಾರ್‌ ಕಡ್ಡಾಯ   

ನವದೆಹಲಿ : ಅಂಚೆ ಕಚೇರಿಯಲ್ಲಿ ಯಾವುದೇ ರೀತಿಯ ಠೇವಣಿ ಇರಿಸಲು ಆಧಾರ್‌ ಸಂಖ್ಯೆ ನಮೂದಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಇನ್ನು ಮುಂದೆ ಅಂಚೆ ಕಚೇರಿಯಲ್ಲಿ ಠೇವಣಿ ಇರಿಸುವುದು, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌), ರಾಷ್ಟ್ರೀಯ ಉಳಿತಾಯ ಪತ್ರ ಮತ್ತು ಕಿಸಾನ್‌ ವಿಕಾಸ ಪತ್ರ ಪಡೆಯಲು ಆಧಾರ್‌ ಸಂಖ್ಯೆ ನೀಡಬೇಕಾಗಿದೆ.

ಅಂಚೆ ಕಚೇರಿಯಲ್ಲಿ ಈಗಾಗಲೇ ಠೇವಣಿ ಇರಿಸಿದವರು ಇದೇ ಡಿಸೆಂಬರ್‌ 31ರೊಳಗೆ ಆಧಾರ್‌ ಸಂಖ್ಯೆಯನ್ನು ಅಂಚೆ ಕಚೇರಿಗೆ ನೀಡಬೇಕು. ಹಣಕಾಸು ಸಚಿವಾಲಯವು ನಾಲ್ಕು ಪ್ರತ್ಯೇಕ ಅಧಿಸೂಚನೆಗಳನ್ನ ಹೊರಡಿಸಿ ಆಧಾರ್‌ ಸಂಖ್ಯೆ ನೀಡಿಕೆಯನ್ನು ಕಡ್ಡಾಯಗೊಳಿಸಿದೆ.

ಆಧಾರ್‌ ಸಂಖ್ಯೆ ಇನ್ನೂ ಸಿಕ್ಕಿಲ್ಲದ ಠೇವಣಿದಾರರು ಆಧಾರ್‌ ನೋಂದಣಿ ಮಾಡಿಸಿಕೊಂಡ ಅರ್ಜಿಯ ಪ್ರತಿಯನ್ನು ಸಲ್ಲಿಸಬೇಕು.

ADVERTISEMENT

ಬ್ಯಾಂಕುಗಳಲ್ಲಿ ಠೇವಣಿ ಇರಿಸುವುದು, ಮೊಬೈಲ್‌ ಸಿಮ್‌ ಪಡೆದುಕೊಳ್ಳುವುದು ಸೇರಿ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್‌ ಸಂಖ್ಯೆ ನಮೂದಿ
ಸುವಂತೆ ಸೂಚಿಸಬೇಕು ಎಂದು ಸರ್ಕಾರ ತಿಳಿಸಿದೆ. ಬೇನಾಮಿ ವಹಿವಾಟು ಮತ್ತು ಕಪ್ಪುಹಣ ತಡೆ ಇದರ ಉದ್ದೇಶ ಎಂದು ಸರ್ಕಾರ ಹೇಳಿದೆ.

ಗಡುವು ವಿಸ್ತರಣೆ

ಸರ್ಕಾರದ ಸೌಲಭ್ಯಗಳು ಮತ್ತು ಸಹಾಯಧನ ಪಡೆದುಕೊಳ್ಳಲು ಆಧಾರ್‌ ಸಂಖ್ಯೆ ನೀಡಿಕೆ ಕಡ್ಡಾಯ. ಆದರೆ ಫಲಾನುಭವಿಗಳು ಆಧಾರ್‌ ಸಂಖ್ಯೆ ನೀಡುವ ಗಡುವನ್ನು ಡಿಸೆಂಬರ್‌ 31ರವರೆಗೆ ಈಗಾಗಲೇ ವಿಸ್ತರಿಸಲಾಗಿದೆ.

135 ಯೋಜನೆಗಳಿಗೆ ಕಡ್ಡಾಯ: 35 ಸಚಿವಾಲಯಗಳು ನೀಡುವ 135 ಯೋಜನೆಗಳಿಗೆ ಆಧಾರ್‌ ಕಡ್ಡಾಯ ಮಾಡಲಾಗಿದೆ. ಬಡ ಕುಟುಂಬಗಳಿಗೆ ಅಡುಗೆ ಅನಿಲ ಉಚಿತ ಸಂಪರ್ಕ, ಸೀಮೆ ಎಣ್ಣೆ ಮತ್ತು ರಸಗೊಬ್ಬರ ಸಹಾಯಧನ, ಪಡಿತರ ವಿತರಣೆ, ನರೇಗಾ ಮುಂತಾದ ಸೌಲಭ್ಯ ಪಡೆಯಲು ಆಧಾರ್‌ ನೋಂದಣಿ ಮಾಡಿರಲೇಬೇಕು. ಆದರೆ ಈವರೆಗೆ ಆಧಾರ್‌ ನೋಂದಣಿ ಮಾಡಿಲ್ಲದವರಿಗೆ ಡಿ. 31ರವರೆಗೆ ವಿನಾಯಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.