ADVERTISEMENT

ಅಂತರ ಧರ್ಮೀಯ ವಿವಾಹಕ್ಕೆ ಸಮ್ಮತಿ ನೀಡಿದ್ದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವಂತೆ ಕರೆ ನೀಡಿದ ಮಸೀದಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 17:57 IST
Last Updated 23 ಅಕ್ಟೋಬರ್ 2017, 17:57 IST
ಅಂತರ ಧರ್ಮೀಯ ವಿವಾಹಕ್ಕೆ ಸಮ್ಮತಿ ನೀಡಿದ್ದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವಂತೆ ಕರೆ ನೀಡಿದ ಮಸೀದಿ
ಅಂತರ ಧರ್ಮೀಯ ವಿವಾಹಕ್ಕೆ ಸಮ್ಮತಿ ನೀಡಿದ್ದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವಂತೆ ಕರೆ ನೀಡಿದ ಮಸೀದಿ   

ಮಲಪ್ಪುರಂ: ಅಂತರ ಧರ್ಮೀಯ ವಿವಾಹದ ಬಗ್ಗೆ ಕೇರಳದಲ್ಲಿ ಭಾರಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಕೇರಳದ ಮಲಪ್ಪುರಂ ಜಿಲ್ಲೆಯ ಮಸೀದಿಯೊಂದು ಈ ರೀತಿಯ ವಿವಾಹಕ್ಕೆ ಸಮ್ಮತಿಸಿದ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವಂತೆ ಹೇಳಿದೆ.
ಇಲ್ಲಿನ ಕನ್ನುಮ್ಮಲ್ ಯೂಸಫ್ ಎಂಬವರು ತಮ್ಮ ಮಗಳನ್ನು ಅನ್ಯ ಧರ್ಮದ ಯುವಕನಿಗೆ ಮದುವೆ ಮಾಡಿಕೊಟ್ಟಿದ್ದರು. ಇದಕ್ಕಾಗಿ ಅಲ್ಲಿನ ಮಸೀದಿ ಈ ಕುಟುಂಬಕ್ಕೆ ಬಹಿಷ್ಕಾರ ಹಾಕಿದೆ.
ಕನ್ನುಮ್ಮಲ್ ಯೂಸಫ್ ಮತ್ತು ಕುಟುಂಬದವರೊಂದಿಗೆ ಯಾರೊಬ್ಬರೂ ಸಂಬಂಧ ಇಟ್ಟುಕೊಳ್ಳಬಾರದು ಎಂದು ಅಕ್ಟೋಬರ್ 19ರಂದು ಮದರುಲ್ ಇಸ್ಲಾಂ ಸಂಘದ ಮಹಲ್ಲು ಸಮಿತಿ (ಮಸೀದಿಯ ಆಡಳಿತ ಮಂಡಳಿ) ವಿಶೇಷ ಸುತ್ತೋಲೆಯೊಂದನ್ನು ಹೊರಡಿಸಿದೆ.
ಕುನ್ನುಮ್ಮಲ್ ಯೂಸಫ್ ಅವರು ತನ್ನ ಮಗಳನ್ನು ಅನ್ಯ ಧರ್ಮದ ಯುವಕನೊಂದಿಗೆ ವಿವಾಹ ಮಾಡಿಕೊಡಲು ತೀರ್ಮಾನಿಸಿದ್ದಾರೆ. ಹಾಗಾಗಿ ಆ ಕುಟುಂಬದೊಂದಿಗೆ ನಾವು ಯಾವುದೇ ರೀತಿಯ ಸಹಕಾರ ನೀಡಬಾರದು. ಅಷ್ಟೇ ಅಲ್ಲದೆ ಮಸೀದಿ ಸಂಬಂಧ ಅಥವಾ ಇನ್ನಿತರ ಕಾರ್ಯಗಳಲ್ಲಿ ಅವರೊಂದಿಗೆ ಬೆರೆಯುವಂತಿಲ್ಲ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಅಂದಹಾಗೆ ಮಸೀದಿಯೊಂದು ಈ ರೀತಿ ಸುತ್ತೋಲೆ ಹೊರಡಿಸಿ ಬಹಿಷ್ಕಾರಕ್ಕೆ ಕರೆ ನೀಡಿದ್ದು ಇದೇ ಮೊದಲೇನೂ ಅಲ್ಲ.

ಅಕ್ಟೋಬರ್ 20ರಂದು ಯೂಸಫ್ ಅವರ ಪುತ್ರಿ 26ರ ಹರೆಯದ ಜಸೀಲಾ ಕ್ರೈಸ್ತ ಧರ್ಮದವರಾದ ಟಿಸೋ ಟೋಮಿ ಜತೆ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾಗಿದ್ದರು. ಮದುವೆಯ ಮರುದಿನ ಪೆರಿಂದಾಲ್‍ಮಣ್ಣದಲ್ಲಿ ನಡೆದ ಆರತಕ್ಷತೆಯಲ್ಲಿ ನೆರೆಹೊರೆಯವರು ಸಂಬಂಧಿಕರು ಭಾಗವಹಿಸಿದ್ದರು.

ADVERTISEMENT

ಆದಾಗ್ಯೂ, ಈ ಮದುವೆ ಯಾವುದೇ ಧರ್ಮದ ಸಂಪ್ರದಾಯದಂತೆ ನಡೆದಿರಲಿಲ್ಲ.

ಜಸೀಲಾ ಅವರ ಮದುವೆಯ ವಿಚಾರವನ್ನು ಅವರ ಮಾನ ರಶೀದ್ ಅವರು ಫೇಸ್‍ಬುಕ್‍ನಲ್ಲಿ ತಿಳಿಸಿದ್ದರು, ಮದುವೆಯ ಮತ್ತು ಆರತಕ್ಷತೆಯ ಚಿತ್ರಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದವು.

ಆಕೆಯ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಸ್ವಾತಂತ್ರ್ಯ ಆಕೆಗಿದೆ. ಜಸೀಲಾ ಮತ್ತು ಟಿಸೋ ಅವರ ಮದುವೆಯೇ ಮೊದಲ ಬಾರಿ ನಡೆಯುವ ಅನ್ಯ ಧರ್ಮೀಯ ಮದುವೆಯಲ್ಲ, ಕಾಲದೊಂದಿಗೆ ಬದಲಾಗುವ ಬದಲಾವಣೆಗಳನ್ನು ತಡೆಯಲು ಮಸೀದಿಗೆ ಸಾಧ್ಯವೇ ? ಎಂದು ರಶೀದ್ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.