ADVERTISEMENT

ಅಂದು ಕ್ಯಾಬ್ ಚಾಲಕ ಇಂದು ಸೇನಾಧಿಕಾರಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST
ಓಂ ಪೈಠಾಣೆ
ಓಂ ಪೈಠಾಣೆ   

ಮುಂಬೈ: ಈ ಮೊದಲು ಓಲಾ ಕ್ಯಾಬ್‌ ಚಾಲಕನಾಗಿದ್ದ ಪುಣೆಯ ಯುವಕನೊಬ್ಬ ಹಲವರ ಮಾರ್ಗದರ್ಶನ, ಸಹಕಾರದಿಂದ ಇಂದು ಸೇನಾ ಅಧಿಕಾರಿ ಹುದ್ದೆಗೇರಿದ್ದಾರೆ.

ಭದ್ರತಾ ಸಿಬ್ಬಂದಿಯೊಬ್ಬರ ಮಗ ಓಂ ಪೈಠಾಣೆ ಈ ಸಾಧನೆ ಮಾಡಿದ್ದು, ಇದೇ 10ರಂದು ಚೆನ್ನೈನ ಆಫೀಸರ್ಸ್‌ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ, ಸೇನಾ ಪಡೆಯ ಶಾರ್ಟ್‌ ಸರ್ವೀಸ್‌ ಕಮಿಷನ್‌ ಆಫೀಸರ್‌ ಆಗಲಿದ್ದಾರೆ.

‘ನಾನು ತುಂಬಾ ಖುಷಿಯಾಗಿದ್ದೇನೆ. ನನ್ನ ತಂದೆ ಉತ್ತಮ್ ಪೈಠಾಣೆ ಅವರೇ ನನಗೆ ಸ್ಫೂರ್ತಿ. ನನ್ನ ಯಶಸ್ಸಿಗೆ ಅವರೇ ಕಾರಣ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಇದೆಲ್ಲ ಆಗುವ ಮುನ್ನ ಓಂ ಅವರ ಸ್ನೇಹಿತರೊಬ್ಬರು ಕ್ಯಾಬ್ ಖರೀದಿಸಿದ್ದರು. ಆ ಕ್ಯಾಬ್‌ ಚಾಲಕರಾಗಿ ಓಂ ಸೇರಿದ್ದರು.

‘ನನ್ನ ಜೀವನದ ತಿರುವಿಗೆ ಕರ್ನಲ್ ಭಕ್ಷಿ ಅವರೇ ಕಾರಣ. ನನ್ನ ಬದುಕು ಬದಲಾಯಿಸಿದವರು ಅವರು. ನನ್ನ ಕ್ಯಾಬ್‌ನಲ್ಲಿ ಅವರು ಕೆಲ ಬಾರಿ ಓಡಾಡಿದ್ದಾರೆ. ಆಗೆಲ್ಲ ಅವರು ‘ಕಂಬೈನ್ಡ್‌ ಡಿಫೆನ್ಸ್‌ ಸರ್ವೀಸಸ್‌’ (ಸಿಡಿಎಸ್‌) ಪರೀಕ್ಷೆ ಬಗ್ಗೆ ತಿಳಿಸುತ್ತಿದ್ದರು’ ಎಂದು ಓಂ ತಿಳಿಸಿದ್ದಾರೆ.

‘ಭಕ್ಷಿ ಅವರು, ಸೇನಾ ಪಡೆ ಸೇರಲು ಯುವಕರನ್ನು ಹುರಿದುಂಬಿಸುವ ‘ಸೇನಾ ಪಡೆ ಅಧಿಕಾರಿಗಳ ಪುನಶ್ಚೇತನ ಕಾರ್ಯಕ್ರಮ’ದ (ಎಎಫ್‌ಒಎಸ್‌ಒಪಿ) ನಿರ್ದೇಶಕ ಕರ್ನಲ್ ಗಣೇಶ್ ಬಾಬು ಅವರನ್ನು ಪರಿಚಯಿಸಿದರು. ಅವರಿಂದ ನನಗೆ ವಿವಿಧ ಪರೀಕ್ಷೆಗಳಿಗೆ ತಯಾರಿ, ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುವ ಕುರಿತು ಅಗತ್ಯ ಮಾಹಿತಿ, ಮಾರ್ಗದರ್ಶನ ದೊರಕಿತು’ ಎಂದು ಹಿಂದಿನದನ್ನು ನೆನಪಿಸಿಕೊಂಡಿದ್ದಾರೆ.

ಮೊದಲ ಪ್ರಯತ್ನದಲ್ಲೇ ಸರ್ವೀಸ್‌ ಸೆಲೆಕ್ಷನ್‌ ಬೋರ್ಡ್‌ ಪರೀಕ್ಷೆ ಉತ್ತೀರ್ಣರಾದ ಓಂ, ಚೆನ್ನೈನಲ್ಲಿ ತರಬೇತಿ ಪಡೆದಿದ್ದಾರೆ. ‘ತರಬೇತಿಯು ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿತು. ಸೇನಾ ಸಮವಸ್ತ್ರದ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದಿದ್ದಾರೆ.

ಬಿ.ಎಸ್‌ಸಿ (ಕಂಪ್ಯೂಟರ್‌ ಸೈನ್ಸ್‌) ಪಧವೀಧರರಾಗಿರುವ ಓಂ, ಬಡ ಕುಟುಂಬದ ಹಿನ್ನೆಲೆಯವರು. ಇಂದು ತಾವು ಏರಿರುವ ಎತ್ತರಕ್ಕೆ ಕಾರಣರಾದ ಹಲವರಿಗೆ ಕೃತಜ್ಙತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.