ಲಖನೌ (ಪಿಟಿಐ): ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು ಶ್ರಮಿಸಿದ ಯುವ ನಾಯಕ ಅಖಿಲೇಶ್ ಯಾದವ್ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ಪಕ್ಷದಲ್ಲಿ ಹಲವರು ತುದಿಗಾಲ ಮೇಲೆ ನಿಂತಿದ್ದಾರೆ.
ಇನ್ನೊಂದೆಡೆ ಅಖಿಲೇಶ್ ಹಾಗೂ ಮುಲಾಯಂ ಸಿಂಗ್ ಯಾದವ್ ಇಬ್ಬರೂ ಬುಧವಾರ ಸಂಜೆ ರಾಜ್ಯಪಾಲ ಬಿ.ಎಲ್.ಜೋಶಿ ಅವರನ್ನು ಭೇಟಿಯಾಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದರು.
ಇದಕ್ಕೂ ಮುನ್ನ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಚರ್ಚೆಯಾಗಿದ್ದು, ಬಹುತೇಕರು ಅಖಿಲೇಶ್ ಹೆಸರನ್ನು ಸೂಚಿಸಿದರು. `ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದನ್ನು ಹೋಳಿ ಹಬ್ಬದ ನಂತರ ತೀರ್ಮಾನಿಸಲಾಗುತ್ತದೆ. ನೂತನ ಶಾಸಕರ ಸಭೆಯನ್ನು ಶನಿವಾರ (ಮಾರ್ಚ್ 10) ಕರೆಯಲಾಗಿದೆ. ಪಕ್ಷದ ವರಿಷ್ಠ ಮುಲಾಯಂ ಸಿಂಗ್, ಸಿ.ಎಂ ಆಯ್ಕೆ ಅಂತಿಮ ನಿರ್ಧಾರ ತೆಗೆದುಕೊಳ್ಳುವರು~ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನರೇಶ್ ಅಗರ್‌ವಾಲ್ ತಿಳಿಸಿದ್ದಾರೆ. 4
ಈ ನಡುವೆ ಅಖಿಲೇಶ್, `ನೇತಾಜಿ~ (ಮುಲಾಯಂ ಸಿಂಗ್) ಅವರೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎಂದಿದ್ದಾರೆ. ಆದರೆ ಅಖಿಲೇಶ್ ಪರ ಒಲವು ಹೆಚ್ಚಿರುವುದರಿಂದ ಅವರೇ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಮುಸ್ಲಿಮರ ಬೆಂಬಲ
ರಾಜ್ಯದಲ್ಲಿ ಎಸ್‌ಪಿ ಗೆಲ್ಲಲು ಪರೋಕ್ಷವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರಣ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ದೂಷಿಸಿದ್ದಾರೆ.
ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಸಲ್ಲಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮುಸ್ಲಿಮರಿಗೆ ಒಳಮೀಸಲಾತಿ ನೀಡುವ ವಿಷಯದಲ್ಲಿ ಈ ಎರಡೂ ಪಕ್ಷಗಳು ಅಂತಿಮವಾಗಿ ಎಸ್‌ಪಿಗೆ ಲಾಭ ಮಾಡಿಕೊಟ್ಟಿವೆ.
ಇದರಿಂದಾ ಗಿಯೇ ಶೇ 70ರಷ್ಟು ಮುಸ್ಲಿಂ ಮತಗಳು ಎಸ್‌ಪಿ ಬುಟ್ಟಿಗೆ ಬಿದ್ದವು ಎಂದು ಹೇಳಿದರು.
ಭ್ರಷ್ಟಾಚಾರದ ಆರೋಪವೇ ಬಿಎಸ್‌ಪಿ ಸೋಲಿಗೆ ಕಾರಣ ಎನ್ನುವುದನ್ನು ಅವರು ಈ ಸಂದರ್ಭದಲ್ಲಿ ಅಲ್ಲಗಳೆದರು.
`ಮಾಯಾಗೆ ಆಭಾರಿ~
`ಉತ್ತರ ಪ್ರದೇಶದಲ್ಲಿ ಎಸ್‌ಪಿ ಗೆಲುವಿಗೆ ಕಾಂಗ್ರೆಸ್ ಕಾರಣ ಎಂದಿರುವ ಮಾಯಾವತಿ ಅವರಿಗೆ ನಾನು ಆಭಾರಿ~ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ನವದೆಹಲಿಯಲ್ಲಿ ವ್ಯಂಗ್ಯವಾಡಿದ್ದಾರೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ರೀತಿ ಪ್ರತಿಕ್ರಿಯಿಸಿದರು. ಮಾಯಾವತಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸೋನಿಯಾ, `ಇಷ್ಟಕ್ಕೂ ಚುನಾವಣೆಯಲ್ಲಿ ಪೈಪೋಟಿ ಇದ್ದೇ ಇರುತ್ತದೆ~ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.