ADVERTISEMENT

ಅಖಿಲೇಶ್ 15ರಂದು ಪ್ರಮಾಣ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST
ಅಖಿಲೇಶ್ 15ರಂದು ಪ್ರಮಾಣ
ಅಖಿಲೇಶ್ 15ರಂದು ಪ್ರಮಾಣ   

ಲಖನೌ (ಪಿಟಿಐ): ಸಮಾಜವಾದಿ ಪಕ್ಷದ ರಾಜಕೀಯದಲ್ಲಿ ಯುವ ಪೀಳಿಗೆಯ ಪ್ರತಿನಿಧಿಯಾಗಿ ಹೊರಹೊಮ್ಮಿರುವ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಇದೇ 15ರಂದು ಮಧ್ಯಾಹ್ನ 1 ಗಂಟೆಗೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಅವರ ಜತೆಗೆ ಸಂಪುಟದ 15 ಸದಸ್ಯರು ಪ್ರಮಾಣ ವಚನ ಸ್ವೀಕರಿಸುವರು.

38 ವರ್ಷದ ಅಖಿಲೇಶ್ ಕೈಗೆ ಆಡಳಿತದ ಚುಕ್ಕಾಣಿ ನೀಡಲು ಹಿರಿಯ ನಾಯಕ ಅಜಂ ಖಾನ್ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದಕ್ಕೆ ಮುಲಾಯಂ ಅವರ ಸಹೋದರ ಶಿವಪಾಲ್ ಸಿಂಗ್ ಕೂಡ ದನಿಗೂಡಿಸಿದ್ದರು. ಶನಿವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಕೊನೆಗೂ ಅಖಿಲೇಶ್ ಹೆಸರನ್ನು ಒಮ್ಮತದಿಂದ ನಿರ್ಧರಿಸಲಾಯಿತು. ಅಜಂ ಖಾನ್ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಮುಂದಿರುವ ಸವಾಲುಗಳು
ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣ ಪೂರೈಸಿದವರಿಗೆ ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಕೊಡುವ ಚುನಾವಣಾ ಪೂರ್ವ ಭರವಸೆಯನ್ನು ಅಖಿಲೇಶ್ ಹೇಗೆ ಈಡೇರಿಸುತ್ತಾರೆ ಎನ್ನುವ ಕುತೂಹಲ ಹಲವರಿಗೆ ಇದೆ. ಅಲ್ಲದೇ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗದ ರೀತಿಯಲ್ಲಿ ನಿರುದ್ಯೋಗ ಭತ್ಯೆಯನ್ನು ಕೊಡುವುದು ಕೂಡ ಸುಲಭದ ಕೆಲಸವೇನೂ ಅಲ್ಲ.

ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಪಕ್ಷವು ಎಂದಿನಿಂದಲೂ ಸೋಲುತ್ತಲೇ ಬಂದಿದೆ. ಹಾಗಾಗಿ ಅಖಿಲೇಶ್‌ಗೆ ಇದೊಂದು ಸವಾಲಿನ ಕೆಲಸವೇ ಸರಿ. ಅವರು ಯಾವಾಗಲೂ ತಾವೊಬ್ಬ ಯುವ ನೇತಾರ ಎಂದು ಬಿಂಬಿಸಿಕೊಂಡು ಬಂದಿದ್ದಾರೆ. ಪಕ್ಷದ ವರ್ಚಸ್ಸು ದಿಢೀರ್ ಬದಲಾಗಿರುವುದಕ್ಕೆ ಅಖಿಲೇಶ್, ಹಿರಿಯ ತಲೆಗಳ ಅಸಮಾಧಾನಎದುರಿಸಬೇಕಾಗಬಹುದೆಂದು ಹೇಳಲಾಗಿದೆ.  4 ಮತ್ತೊಂದು ಸುದ್ದಿ ಪುಟ 8

ಈ ಅಧಿಕೃತ ನಿರ್ಧಾರ ಹೊರಬಿದ್ದ ತಕ್ಷಣವೇ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್, ಧರ್ಮ, ಜಾತಿಯ ಎಲ್ಲೆಗಳನ್ನು ಮರೆತು, ಸಮಜವಾದಿ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾದ ಎಲ್ಲ ಭರವಸೆಗಳನ್ನೂ ಈಡೇರಿಸುವುದಾಗಿ ಹೇಳಿದರು. ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವುದು ತಮ್ಮ ಸರ್ಕಾರದ ಆದ್ಯತೆಯ ವಿಷಯ ಎಂದ ಅವರು, ಇದಕ್ಕಾಗಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಮಾಯಾವತಿ ಸರ್ಕಾರ ಕಟ್ಟಿದ್ದ ಸ್ಮಾರಕಗಳನ್ನು ತೆರವುಗೊಳಿಸಿದ ಜಾಗದಲ್ಲಿ ವೈದ್ಯಕೀಯ ಅಥವಾ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT