ADVERTISEMENT

ಅಡ್ವಾಣಿಯ 38 ದಿನಗಳ ಜನ ಚೇತನ ಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 8:55 IST
Last Updated 11 ಅಕ್ಟೋಬರ್ 2011, 8:55 IST
ಅಡ್ವಾಣಿಯ 38 ದಿನಗಳ ಜನ ಚೇತನ ಯಾತ್ರೆ ಆರಂಭ
ಅಡ್ವಾಣಿಯ 38 ದಿನಗಳ ಜನ ಚೇತನ ಯಾತ್ರೆ ಆರಂಭ   

ಸೀತಾಬ್ದಿಯಾರ (ಪಿಟಿಐ):  ಭ್ರಷ್ಟಾಚಾರ ನಿಗ್ರಹದಲ್ಲಿ ಸೋತಿರುವ ಯುಪಿಎ ಸರ್ಕಾರದ ವೈಫಲ್ಯವನ್ನು ಜನತೆಗೆ ತಿಳಿಸುವ ಮತ್ತು ಪರದೇಶದಲ್ಲಿ ಕೊಳೆಯುತ್ತಿರುವ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುವಂತೆ ಆಗ್ರಹಿಸುವ ಉದ್ದೇಶದ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರ 38 ದಿನಗಳ ಜನ ಚೇತನ ಯಾತ್ರೆ ಮಂಗಳವಾರ ಇಲ್ಲಿಂದ ಆರಂಭಗೊಂಡಿತು.

ಇಲ್ಲಿನ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಬಿಹಾರದ ಮುಖ್ಯಮಂತ್ರಿ  ನಿತೀಶ್ ಕುಮಾರ್ ಅವರು ಹಸಿರು ನಿಶಾನೆ ಹಾರಿಸಿ, ಪರದೇಶದಲ್ಲಿರುವ ಕಪ್ಪು ಹಣ ಮರಳಿ ತರುವಂತೆ ಆಗ್ರಹಿಸುವ ಹಾಗೂ ಭ್ರಷ್ಟಾಚಾರ ವಿರುದ್ಧದ ಅಡ್ವಾಣಿ ಅವರ ಜನ ಚೇತನ ಯಾತ್ರೆಗೆ ಚಾಲನೆ ನೀಡಿದರು. 

~ಇಂದು ಇಲ್ಲಿಂದ ನನ್ನ ಜನ ಚೇತನ ಯಾತ್ರೆಯನ್ನು ಔಪಚಾರಿಕವಾಗಿ ಆರಂಭಿಸಿರುವೆ~ ಎಂದು ನುಡಿದ ಅಡ್ವಾಣಿ ಅವರು, ಕಳೆದ 1970ರಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ಸೇತರ ಪಕ್ಷಗಳನ್ನು ಒಂದುಕಡೆ ಸೇರಿಸಿದ ಸಮಾಜವಾದಿ ಧೀಮಂತ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಶ್ರಮವನ್ನು ಶ್ಲಾಘಿಸಿದರು.

ADVERTISEMENT

ಜಯಪ್ರಕಾಶ್ ಅವರ ಕಾಲದ ಪರಿಸ್ಥಿತಿ ಮತ್ತು ಇಂದಿನ ಪರಿಸ್ಥಿತಿಗಳಲ್ಲಿ ಸಾಮ್ಯತೆ ಗುರುತಿಸಿದ ಅಡ್ವಾಣಿ ಅವರು, ~ಭ್ರಷ್ಟಾಚಾರ ಈ ದೇಶದಿಂದ ತೊಲಗಬೇಕು. ಕೇವಲ ನಾಯಕತ್ವ ಬದಲಾವಣೆಯಿಂದ ಯಾವ ಪ್ರಯೋಜನವೂ ಆಗದು, ವ್ಯವಸ್ಥೆಯಲ್ಲಿಯೇ ಸಮಗ್ರ ಬದಲಾವಣೆ ತರಬೇಕಿದೆ~ ಎಂದು ಪ್ರತಿಪಾದಿಸಿದರು.

ದೇಶದ ಜನತೆ ತಮ್ಮ  ಸಾಮರ್ಥ್ಯದ ಬಗೆಗಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಕಳೆದು ಹೋಗಿರುವ ಆ ವಿಶ್ವಾಸವನ್ನು ಮತ್ತೆ ಉದ್ದೀಪನಗೊಳಿಸುವುದೇ ಈ ಯಾತ್ರೆಯ ಸಾಧನೆಯಾಗಲಿದೆ ಎಂದೂ ಅವರು ಹೇಳಿದರು.

ತಮ್ಮ ಈ ಯಾತ್ರೆಗೆ ಜಯಪ್ರಕಾಶ್ ನಾರಾಯಣ್ ಅವರ ಕೆಲಸಗಳೇ ತಮಗೆ ಸ್ಫೂರ್ತಿ ಎಂದಿರುವ 82 ಹರೆಯದ ಹಿರಿಯ ಬಿಜೆಪಿ ನಾಯಕ ಅಡ್ವಾಣಿ ಅವರು, ಉತ್ತಮ ಹಾಗೂ ಪಾರದರ್ಶಕ ಆಡಳಿತ, ಲೋಕಪಾಲ್  ಜಾರಿ ಹಾಗೂ ಪರದೇಶದಲ್ಲಿರುವ ನಮ್ಮ ದೇಶದ ಕಪ್ಪು ಹಣವನ್ನು ಮತ್ತೆ ದೇಶದ ಉದ್ಧಾರಕ್ಕಾಗಿ ಮರಳಿ ತರುವುದು ಈ ಯಾತ್ರೆಯ ಉದ್ದೇಶ ಎಂದು ಪುನರುಚ್ಚರಿಸಿದರು.

ಅಡ್ವಾಣಿ ಅವರ ಜನ ಚೇತನ ಯಾತ್ರೆಯು ಈ ಯಾತ್ರೆಯು 23 ರಾಜ್ಯಗಳಲ್ಲಿ ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಲಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.