ADVERTISEMENT

ಅಡ್ವಾಣಿ ಮನೆ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 19:59 IST
Last Updated 8 ಜೂನ್ 2013, 19:59 IST

ನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಮಹತ್ವದ ಪಾತ್ರ ವಹಿಸುವುದನ್ನು ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿ ಮೋದಿ ಬೆಂಬಲಿಗರು ಅಡ್ವಾಣಿ ಅವರ ಇಲ್ಲಿನ ಮನೆಯ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

`ನರೇಂದ್ರ ಮೋದಿ ಸೇನೆ' ಎಂಬ ಬ್ಯಾನರ್‌ನೊಂದಿಗೆ ಪೃಥ್ವಿರಾಜ್ ರಸ್ತೆಯಲ್ಲಿನ ಅಡ್ವಾಣಿ ನಿವಾಸದ ಎದುರು ಹಾಜರಾದ ಕಾರ್ಯಕರ್ತರು, ಮೋದಿ ಪರ ಘೋಷಣೆ ಹಾಕಿ ಅರ್ಧ ಗಂಟೆ ಕಾಲ ಧರಣಿ ನಡೆಸಿದರು.

`ನರೇಂದ್ರ ಮೋದಿ ಜಿಂದಾಬಾದ್', `ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿ' ಎಂಬ ಫಲಕಗಳನ್ನು ಹಿಡಿದಿದ್ದ ಕಾರ್ಯಕರ್ತರು, ಮಹತ್ವದ ಪಾತ್ರ ವಹಿಸಲು ಮೋದಿ ಅವರಿಗೆ ಅಡ್ವಾಣಿಯವರು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು. `ಅಡ್ವಾಣಿ ಕೆಳಗೆ ಇಳಿಯಲಿ; ನರೇಂದ್ರ ಮೋದಿ ಅವರು ಮುಂದೆ ಬರಲು ಅವಕಾಶ ಮಾಡಿಕೊಡಲಿ' ಎಂದು ಆಗ್ರಹಿಸಿದರು.

ರೌಡಿ ಸಂಸ್ಕೃತಿ: ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ನಿವಾಸದ ಎದುರು ನರೇಂದ್ರ ಮೋದಿ ಅವರು ನಡೆಸಿದ ಪ್ರತಿಭಟನೆಯನ್ನು `ರೌಡಿ ಸಂಸ್ಕೃತಿ' ಎಂದು ಟೀಕಿಸಿರುವ ಕಾಂಗ್ರೆಸ್, ಆ ಪಕ್ಷದವರು ತಮ್ಮ ನಾಯಕರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಇದು ಉದಾಹರಣೆ ಎಂದು ಕುಟುಕಿದ್ದಾರೆ.

ಅಡ್ವಾಣಿಯವರ ನಿವಾಸದ ಎದುರು ನಡೆದ ಪ್ರತಿಭಟನೆ ಎಲ್ಲರೂ ಆತಂಕಪಡಬೇಕಾದ ವಿಚಾರ. ನಾಯಕರೊಬ್ಬರು ಅವರ ಕಾರ್ಯಕರ್ತರಿಂದಲೇ ಇಂತಹ ಗೂಂಡಾ ವರ್ತನೆ ಎದುರಿಸಬೇಕಾಗಿ ಬಂದಿರುವುದನ್ನು ಇಡೀ ರಾಷ್ಟ್ರದ ಜನತೆ ನೋಡಿದೆ ಎಂದು ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧರಿ ಟೀಕಿಸಿದ್ದಾರೆ.

`ಪಕ್ಷಕ್ಕೆ ಸೇರಿದವರಲ್ಲ'
ಪಣಜಿ:
ಅಡ್ವಾಣಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಇದೇ ವೇಳೆ, ಈ ಪ್ರತಿಭಟನೆ ನಡೆಸಿರುವವರು ತಮ್ಮ ಪಕ್ಷಕ್ಕೆ ಸೇರಿದವರಲ್ಲ ಎಂದೂ ಸಮರ್ಥಿಸಿಕೊಂಡಿದೆ.

`ಅಡ್ವಾಣಿ ಅವರು ಪಕ್ಷದ ಹಿರಿಯ ನಾಯಕರು. ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ಬಿಜೆಪಿಗೆ ಸೇರಿದವರಲ್ಲ' ಎಂದು ಪಕ್ಷದ ವಕ್ತಾರ ಶಹನವಾಜ್ ಹುಸೇನ್ ಸ್ಪಷ್ಟನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್, `ಅಡ್ವಾಣಿಯವರ ನಿವಾಸದ ಎದುರು ನಡೆಯುತ್ತಿರುವ ಪ್ರತಿಭಟನೆಯನ್ನು ಪಕ್ಷ ಖಂಡಿಸುತ್ತದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT