ನವದೆಹಲಿ: ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಮತ್ತೊಮ್ಮೆ ಬಿಕ್ಕಟ್ಟು ತಲೆದೋರಿದ್ದು, ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಅವರ ಇಚ್ಚೆಗೆ ವಿರುದ್ಧವಾಗಿ ಗುಜರಾತಿನ ಗಾಂಧಿನಗರದಿಂದ ಕಣಕ್ಕಿಳಿಸಲು ಪಕ್ಷದ ಚುನಾವಣಾ ಸಮಿತಿ ಬುಧವಾರ ತೀರ್ಮಾನಿಸಿದೆ. ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಾಣಸಿ ಜತೆಗೆ ಗುಜರಾತಿನ ವಡೋದರದಿಂದಲೂ ಸ್ಪರ್ಧೆ ಮಾಡಲಿದ್ದಾರೆ.
ಅಡ್ವಾಣಿ ಮಧ್ಯಪ್ರದೇಶದ ಭೋಪಾಲ್‌ನಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಬೆಳಿಗ್ಗೆ ಸೇರಿದ್ದ ಬಿಜೆಪಿ ಸಂಸದೀಯ ಮಂಡಳಿ ಹಿರಿಯ ನಾಯಕನ ಹೆಸರನ್ನು ಗಾಂಧಿನಗರದಿಂದ ಅಂತಿಮಗೊಳಿಸಿತು. ಬಳಿಕ ಚುನಾವಣಾ ಸಮಿತಿ ಇದನ್ನು ಅನುಮೋದಿಸಿತು. ಪ್ರತಿ ಹಂತದಲ್ಲೂ ಮೋದಿ ಅವರಿಗೆ ಅಡ್ಡಿಯಾಗುತ್ತಿರುವ ಅಡ್ವಾಣಿ ಪಕ್ಷದೊಳಗೆ ಮತ್ತೊಮ್ಮೆ ಮೂಲೆಗುಂಪಾಗಿದ್ದಾರೆ.
ಚುನಾವಣಾ ಸಮಿತಿ ನಿರ್ಧಾರದಿಂದ ಅಸಮಾಧಾನಗೊಂಡಿರುವ ಅಡ್ವಾಣಿ ಅವರನ್ನು ಮನವೊಲಿಸಲು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ನಾಯಕರು ಪ್ರಯತ್ನ ಆರಂಭಿಸಿದ್ದಾರೆ. ಬಿಕ್ಕಟ್ಟು ಪರಿಹರಿಸಲು ಆರ್‌ಎಸ್‌ಎಸ್ ಮಧ್ಯಪ್ರವೇಶ ಮಾಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಗುಜರಾತ್ ಬಿಜೆಪಿ ಘಟಕವು ಗಾಂಧಿ ನಗರದಿಂದ ಅಡ್ವಾಣಿ ಹೆಸರನ್ನು ಮಾತ್ರ ಶಿಫಾರಸು ಮಾಡಿತ್ತು. ಸಂಸದೀಯ ಮಂಡಳಿ ಅಧ್ಯಕ್ಷರೂ ಆದ ಅಡ್ವಾಣಿ 1991ರಿಂದ ಐದು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 1996ರ ಚುನಾವಣೆಯಲ್ಲಿ ಮಾತ್ರ ಅವರು ಸ್ಪರ್ಧೆ ಮಾಡಿರಲಿಲ್ಲ. ಪಕ್ಷದ ಚುನಾವಣಾ ಸಮಿತಿ 67 ಅಭ್ಯರ್ಥಿಗಳ 5ನೇ ಪಟ್ಟಿ ಅಂತಿಮಗೊಳಿಸಿದ ಸಭೆಯಲ್ಲಿ ಈ ಹಿರಿಯ ನಾಯಕ ಹಾಜರಿರಲಿಲ್ಲ.
ಚುನಾವಣಾ ಸಮಿತಿ ಸಭೆಗೆ ಮೊದಲು ಅಡ್ವಾಣಿ ತಾವು ಗಾಂಧಿ ನಗರಕ್ಕೆ ಬದಲು ಭೋಪಾಲ್‌ನಿಂದ ಸ್ಪರ್ಧೆ ಮಾಡುವುದಾಗಿ ರಾಜನಾಥ್ ಸಿಂಗ್ ಅವರಿಗೆ ಹೇಳಿದ್ದರು. ಪಕ್ಷದ ಕೆಲವು ನಾಯಕರ ಇಚ್ಚೆಗೆ ಅನುಗುಣವಾಗಿ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದ್ದು, ತಮಗೂ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ ಎಂದು ರಾಜನಾಥ್ ಸಿಂಗ್ ಬಳಿ ಅಡ್ವಾಣಿ ಪ್ರತಿಪಾದಿಸಿದ್ದರು ಎಂದು ಮೂಲಗಳು ಖಚಿತಪಡಿಸಿವೆ. ತಮ್ಮ ಕ್ಷೇತ್ರದ ಚರ್ಚೆ ನಡೆಯುವ ಸಭೆಯಲ್ಲಿ ತಾವು ಹಾಜರಿರುವುದು ಸರಿಯಲ್ಲ ಎಂಬ ಕಾರಣ ನೀಡಿ ಅಡ್ವಾಣಿ ಚುನಾವಣಾ ಸಮಿತಿಯಿಂದ ದೂರವಿದ್ದರು. ಅನಂತರ ಸಮಿತಿ ತೀರ್ಮಾನವನ್ನು ಅವರಿಗೆ ತಿಳಿಸಲಾಯಿತು.
ಮೋದಿ ಪಟ್ಟು: ವಿಶ್ವಸನೀಯ ಮೂಲಗಳ ಪ್ರಕಾರ ಮಧ್ಯಪ್ರದೇಶ ಬಿಜೆಪಿ ಘಟಕವೂ ಭೋಪಾಲ್ ಕ್ಷೇತ್ರದಿಂದ ಯಾವ ಹೆಸರನ್ನೂ ಸೂಚಿಸದೆ ಖಾಲಿ ಕಳುಹಿಸಿತ್ತು. ಅಡ್ವಾಣಿ ಅವರಿಗಾಗಿಯೇ ಅದನ್ನು ಖಾಲಿ ಇಡಲಾಗಿತ್ತು. ಸುದೀರ್ಘ ಸಮಾಲೋಚನೆ ಬಳಿಕ ಅಡ್ವಾಣಿ ಹೆಸರನ್ನು ಗಾಂಧಿನಗರದಿಂದ ಅಂತಿಮಗೊಳಿಸಲಾಯಿತು. ಅಡ್ವಾಣಿ ಗಾಂಧಿ ನಗರದಿಂದಲೇ ಸ್ಪರ್ಧಿಸಬೇಕೆಂದು ಮೋದಿ ಪಟ್ಟು ಹಿಡಿದರು. ಸಭೆಯಲ್ಲಿದ್ದ ಕೆಲವು ನಾಯಕರು ಅವರನ್ನು ಬೆಂಬಲಿಸಿದರು ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಮೋದಿ ಅವರ ಜತೆಗಿನ ಸಂಬಂಧ ಹಳಸಿರುವ ಹಿನ್ನೆಲೆಯಲ್ಲಿ ಅಡ್ವಾಣಿ ಭೋಪಾಲ್‌ಗೆ ವಲಸೆ ಹೋಗಲು ಬಯಸಿದ್ದರು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಅವರು ಕ್ಷೇತ್ರ ಬದಲಾವಣೆ ಮಾಡುವ ನಿಲುವಿಗೆ ಬಂದಿದ್ದರು ಎನ್ನಲಾಗಿದೆ.
5ನೆ ಪಟ್ಟಿ ಅಂತಿಮ:ಬಿಜೆಪಿ ಬುಧವಾರ ಅಂತಿಮಗೊಳಿಸಿದ 67 ಅಭ್ಯರ್ಥಿಗಳ ಐದನೆ ಪಟ್ಟಿಯಲ್ಲಿ ಗುಜರಾತ್‌ನ 21, ಉತ್ತರ ಪ್ರದೇಶದ 15, ರಾಜಸ್ತಾನದ 21 ಕ್ಷೇತ್ರಗಳು ಸೇರಿವೆ ಎಂದು ತಾವರ್‌ಚಂದ್ ಗೆಹ್ಲೋಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಟಿ ಹೇಮಾ ಮಾಲಿನಿ ಅವರಿಗೆ ಮಥುರಾದಿಂದ ಟಿಕೆಟ್ ನೀಡಿದೆ. ಒಲಿಂಪಿಕ್ ಪದಕ ವಿಜೇತ ಶೂಟರ್ ರಾಜವರ್ಧನ ಸಿಂಗ್ ರಾಥೋಡ್ ಅವರನ್ನು ಜೈಪುರ (ಗ್ರಾಮೀಣ) ಕ್ಷೇತ್ರದಿಂದ ಕಣಕ್ಕಿಳಿಸಲಾಗುತ್ತಿದೆ.
ಕರ್ನಾಟಕದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದರೂ ಬಳ್ಳಾರಿ, ಬೀದರ್ ಮತ್ತು ಹಾಸನ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟ ಮಾಡಲಿಲ್ಲ. ಬಳ್ಳಾರಿಯಿಂದ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಟಿಕೆಟ್ ನೀಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಔಪಚಾರಿಕ ಪ್ರಕಟಣೆಯಷ್ಟೇ ಬಾಕಿ ಉಳಿದಿದೆ.
ಪ್ರಕಟಣೆಗೆ ತಡೆ: ಶ್ರೀರಾಮುಲು ಬಿಜೆಪಿ ಸೇರ್ಪಡೆಗೆ ಸುಷ್ಮಾ ಸ್ವರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಅಧಿಕೃತ ಪ್ರಕಟಣೆ ತಡೆ ಹಿಡಿಯಲಾಗಿದೆ. ಹಾಸನದಿಂದ ಮಾಜಿ ಸಂಸದ ವಿಜಯ ಶಂಕರ್ ಅವರ ಹೆಸರು ಅಂತಿಮಗೊಳಿಸಲಾಗಿದೆ. ಆದರೆ ಅವರು ಮೈಸೂರು ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಬೀದರ್ನಿಂದ ಗುರುಪಾದಪ್ಪ ನಾಗಮಾರಪಲ್ಲಿ ಅಥವಾ ಅವರ ಮಗ ಸೂರ್ಯಕಾಂತ ನಾಗಮಾರಪಲ್ಲಿ ಅವರಲ್ಲಿ ಯಾರಿಗೆ ಟಿಕೆಟ್ ಕೊಡಬೇಕೆಂದು ತಲೆದೋರಿರುವ ಗೊಂದಲ ಬಗೆಹರಿದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.