ADVERTISEMENT

ಅಣ್ಣಾ ತಂಡದ ಗಂಭೀರ ಆರೋಪ: ಭ್ರಷ್ಟಾಚಾರದಲ್ಲಿ ಪ್ರಧಾನಿಯೂ ಭಾಗಿ

​ಪ್ರಜಾವಾಣಿ ವಾರ್ತೆ
Published 26 ಮೇ 2012, 19:30 IST
Last Updated 26 ಮೇ 2012, 19:30 IST
ಅಣ್ಣಾ ತಂಡದ ಗಂಭೀರ ಆರೋಪ: ಭ್ರಷ್ಟಾಚಾರದಲ್ಲಿ ಪ್ರಧಾನಿಯೂ ಭಾಗಿ
ಅಣ್ಣಾ ತಂಡದ ಗಂಭೀರ ಆರೋಪ: ಭ್ರಷ್ಟಾಚಾರದಲ್ಲಿ ಪ್ರಧಾನಿಯೂ ಭಾಗಿ   

ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಅವರ ಸಂಪುಟದ 14 ಹಿರಿಯ ಸಚಿವರ ವಿರುದ್ಧ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಂಡ `ಚಾರ್ಜ್‌ಶೀಟ್~ ರೂಪದಲ್ಲಿ ಆರೋಪ ಮಾಡಿದೆ. ಈ ಆರೋಪಗಳ ತನಿಖೆಗೆ ವಿಶೇಷ ತಂಡ ರಚಿಸುವಂತೆ ಒತ್ತಾಯ ಮಾಡಿದೆ.

ಪ್ರಧಾನಿ ಮತ್ತು ಅವರ ಸಂಪುಟದ ಪ್ರಭಾವಿ ಸಚಿವರ ವಿರುದ್ಧ ತನಿಖೆ ನಡೆಸಲು ಯಾವುದೇ ತನಿಖಾ ಸಂಸ್ಥೆಗೆ ಸಾಧ್ಯವಿಲ್ಲದ್ದರಿಂದ ಮೂವರು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ `ಸ್ವತಂತ್ರ ವಿಶೇಷ ತನಿಖಾ ತಂಡ~ (ಎಸ್‌ಐಟಿ) ರಚಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅಣ್ಣಾ ಹಜಾರೆ ತಂಡದ ಪ್ರಮುಖ ಸದಸ್ಯ ಅರವಿಂದ ಕೇಜ್ರಿವಾಲ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ನಾವು ಮನಮೋಹನ್‌ಸಿಂಗ್ ಅವರಿಗೆ ಪತ್ರ ಬರೆದಿದ್ದೇವೆ. ಪತ್ರದ ಜತೆ ಆರೋಪ ಪಟ್ಟಿ~ ಕಳುಹಿಸಿದ್ದೇವೆ. ನಮ್ಮ ಆರೋಪಗಳ ತನಿಖೆಗೆ ಜುಲೈ 24ರೊಳಗೆ ಯುಪಿಎ ಸರ್ಕಾರ ಸ್ವತಂತ್ರ ತನಿಖಾ ಸಂಸ್ಥೆ ರಚನೆ ಮಾಡದಿದ್ದರೆ ಜುಲೈ 25ರಿಂದ ಅನಿರ್ದಿಷ್ಟ ಕಾಲದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ಕೊಡಲಾಗಿದೆ ಎಂದು ಹೇಳಿದರು.

ಹಜಾರೆ ಆರೋಗ್ಯ ಸರಿ ಇಲ್ಲದಿರುವುದರಿಂದ ಅವರು ಉಪವಾಸ ಕೂರುವುದಿಲ್ಲ. ತಂಡದ ಉಳಿದ ಸದಸ್ಯರು ಉಪವಾಸ ಮಾಡಲಿದ್ದಾರೆ~ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದರು. ಪ್ರಧಾನಿ ಅವರಲ್ಲದೆ, ಸಚಿವರಾದ ಪಿ. ಚಿದಂಬರಂ, ಪ್ರಣವ್ ಮುಖರ್ಜಿ, ಶರದ್ ಪವಾರ್, ಕಮಲ್ ನಾಥ್, ಎಸ್.ಎಂ. ಕೃಷ್ಣ, ಪ್ರಫುಲ್ ಪಟೇಲ್, ವಿಲಾಸ್‌ರಾವ್ ದೇಶ್‌ಮುಖ್, ವೀರಭದ್ರಸಿಂಗ್, ಕಪಿಲ್ ಸಿಬಲ್, ಜಿ.ಕೆ. ವಾಸನ್, ಫರೂಕ್ ಅಬ್ದುಲ್ಲಾ, ಸಲ್ಮಾನ್ ಖುರ್ಷಿದ್, ಎಂ.ಕೆ. ಅಳಗಿರಿ ಹಾಗೂ ಸುಶಿಲ್ ಕುಮಾರ್ ಶಿಂಧೆ ಅವರ ಮೇಲೆ ಆರೋಪಗಳನ್ನು ಮಾಡಲಾಗಿದೆ.

ಆಧಾರ ರಹಿತ : ಅಣ್ಣಾ ತಂಡದ ಆರೋಪಗಳು ಆಧಾರರಹಿತವಾಗಿದ್ದು, ಅವುಗಳಿಗೆ ಉತ್ತರ ಕೊಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಕಲ್ಲಿದ್ದಲು ಹಗರಣ ಸಂಬಂಧ ಸಿಎಜಿ ವರದಿಯಲ್ಲಿ ಎಲ್ಲೂ ಪ್ರಧಾನಿ ಮೇಲೆ ಆರೋಪ ಮಾಡಿಲ್ಲ. ವರದಿಯ ಯಾವುದೋ ಭಾಗವನ್ನು ಉಲ್ಲೇಖಿಸಿ ಅಣ್ಣಾ ತಂಡ ಆರೋಪ ಮಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಪ್ರತಿಕ್ರಿಯಿಸಿದ್ದಾರೆ.

ಸಿಎಜಿ ವರದಿಗಳು, ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳು ಮತ್ತಿತರಮೂಲಗಳಿಂದ ಸಂಗ್ರಹಿಸಿದ ದಾಖಲೆಗಳ ಆಧಾರದ ಮೇಲೆ ಪ್ರಧಾನಿ ಹಾಗೂ ಅವರ ಸಹೊದ್ಯೋಗಿಗಳ ವಿರುದ್ಧ ಆರೋಪಗಳನ್ನು ಮಾಡಲಾಗಿದೆ.  ಯುಪಿಎ ಸರ್ಕಾರ ಕಳಂಕಗಳ ಸುಳಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಅದರಿಂದ ಹೊರಬರಲು ತನಿಖೆ ನಡೆಸುವುದು ಅನಿವಾರ್ಯ ಎಂದು ಕೇಜ್ರಿವಾಲ್ ಅಭಿಪ್ರಾಯಪಟ್ಟರು.

ಸಚಿವರ ವಿರುದ್ಧದ ಆರೋಪಗಳ ತನಿಖೆ ಆರು ತಿಂಗಳಲ್ಲಿ ಮುಗಿಯಬೇಕು. ತನಿಖೆ ನಡೆಸುವ ವಿಶೇಷ ತಂಡಕ್ಕೆ ಎಲ್ಲ ಸೌಲಭ್ಯಗಳನ್ನು ಕೊಡಬೇಕು. ತಂಡದ ನೇತೃತ್ವವನ್ನು ಮೂವರು ನಿವೃತ್ತ ನ್ಯಾಯಮೂರ್ತಿಗಳು ವಹಿಸಬೇಕು ಎಂದು ಒತ್ತಾಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.