ADVERTISEMENT

ಅಣ್ಣಾ ತಂಡದ ಮೇಲೆ ಬೂಟು

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಡೆಹ್ರಾಡೂನ್ (ಪಿಟಿಐ): ವಿಧಾನ ಸಭಾ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಜನಲೋಕಪಾಲ ಮಸೂದೆಯ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವ ಅಣ್ಣಾ ತಂಡದ ಸದಸ್ಯರತ್ತ ವ್ಯಕ್ತಿಯೊಬ್ಬ ಬೂಟು ಎಸೆಯಲು ಯತ್ನಿಸಿದ ಘಟನೆ ಶನಿವಾರ ಇಲ್ಲಿ ನಡೆಯಿತು.

ಆದರೆ ಪೊಲೀಸರು ತಕ್ಷಣವೇ ಆತನನ್ನು ಬಂಧಿಸಿದರು. ಇಲ್ಲಿನ ಪ್ರೇಮ್‌ನಗರ್ ನಿವಾಸಿ ಕಿಶನ್ ಲಾಲ್ (35) ಬಂಧಿತ ವ್ಯಕ್ತಿಯಾಗಿದ್ದಾನೆ.

ಅಣ್ಣಾ ತಂಡದ ಅರವಿಂದ ಕೇಜ್ರಿವಾಲ್, ಮನಿಶ್ ಸಿಸೋಡಿಯಾ ಮತ್ತು ಕಿರಣ್ ಬೇಡಿ ಲಾರ್ಡ್ ವೆಂಕಟೇಶ್ವರ ಹಾಲ್‌ನಲ್ಲಿ ಸಾರ್ವಜನಿಕ ಸಭೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಡೆಹ್ರಾಡೂನ್ ಪೊಲೀಸ್ ವರಿಷ್ಠಾಧಿಕಾರಿ ಜಿ.ಎನ್. ಗೋಸ್ವಾಮಿ ತಿಳಿಸಿದ್ದಾರೆ. ಕಿಶನ್‌ಲಾಲ್ ಅಣ್ಣಾ ತಂಡದತ್ತ ಬೂಟು ಎಸೆದಿದ್ದು, ಅದು ಯಾರ ಮೇಲೂ ಬೀಳಲಿಲ್ಲ ಎಂದು ಸಭೆಯಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

`ಹಲ್ಲಿಲ್ಲದ ಮಸೂದೆ~ (ಹರಿದ್ವಾರ ವರದಿ): ಸಂಸತ್‌ನಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಲೋಕಪಾಲ ಮಸೂದೆ ಹಲ್ಲಿಲ್ಲದ ಮತ್ತು ಅತ್ಯಂತ ದುರ್ಬಲ ಮಸೂದೆ ಎಂದು ಅಣ್ಣಾ ತಂಡದ ಸದಸ್ಯರು ಆರೋಪಿಸಿದರು.

ಪ್ರಬಲ ಜನಲೋಕಪಾಲ ಮಸೂದೆಗೆ ಒತ್ತಾಯಿಸಿ, ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ಅಣ್ಣಾ ತಂಡದ ಸದಸ್ಯರು ತಮ್ಮ ಉದ್ದೇಶಿತ ಪ್ರಚಾರವನ್ನು ಇಲ್ಲಿಂದ ಶನಿವಾರ ಆರಂಭಿಸಿದರು.

`ತಾತ್ವಿಕ ತಳಹದಿ ಇಲ್ಲ~ (ಜೈಪುರ ವರದಿ): ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಸೈದ್ಧಾಂತಿಕ ಕೊರತೆಯಿಂದ ಕೂಡಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಅರುಣಾ ರಾಯ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು, `ಭ್ರಷ್ಟಾಚಾರದ ವಿರುದ್ಧದ ಸೆಣಸಾಟ ಉತ್ತಮ ಆಂದೋಲನವೇ ಸರಿ. ಆದರೆ ಇದು ರಾಜಕೀಯ ಚಳವಳಿ ಆಗುವುದು ಅಷ್ಟೊಂದು ಸುಲಭವಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.