ADVERTISEMENT

ಅಣ್ಣಾ: ಹೊಸ ಬಿರುಕು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST
ಅಣ್ಣಾ: ಹೊಸ ಬಿರುಕು
ಅಣ್ಣಾ: ಹೊಸ ಬಿರುಕು   

ನೊಯಿಡಾ (ಪಿಟಿಐ): ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಅಣ್ಣಾ ಹಜಾರೆ ಮತ್ತು ಯೋಗ ಗುರು ಬಾಬಾ ರಾಮದೇವ ಮಧ್ಯೆ ವೈಮನಸ್ಸು ಉಂಟಾಗಿರುವ ಬೆನ್ನಲ್ಲೇ, ಅಣ್ಣಾ ತಂಡದಲ್ಲಿ ಭಾನುವಾರ ಮತ್ತೊಂದು ಹೊಸ ಬಿರುಕು ಕಾಣಿಸಿಕೊಂಡಿದೆ.

ಅಣ್ಣಾ ತಂಡದ ಪ್ರಮುಖರ ಸಮಿತಿಯಿಂದ (ಕೋರ್ ಕಮಿಟಿ)  ಮುಸ್ಲಿಂ ಸದಸ್ಯನೊಬ್ಬನನ್ನು ಉಚ್ಚಾಟಿಸುವ ಮೂಲಕ ಇಲ್ಲಿ ನಡೆದ  ತಂಡದ ಪ್ರಮುಖರ ಸಭೆ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.
ಸಭೆಯ ಕಾರ್ಯಕಲಾಪಗಳನ್ನು ರಹಸ್ಯವಾಗಿ ಧ್ವನಿಮುದ್ರಿಸಿಕೊಳ್ಳುತ್ತಿದ್ದ ಆರೋಪದ ಮೇರೆಗೆ ಸಮಿತಿಯಲ್ಲಿದ್ದ ಮುಫ್ತಿ ಶಮೀಮ್ ಕಜ್ಮಿ ಅವರನ್ನು ಉಚ್ಚಾಟಿಸಲಾಯಿತು. ಇದರಿಂದ ಅಸಮಾಧಾನಗೊಂಡ ಕಜ್ಮಿ, `ಅಣ್ಣಾ ಆಂದೋಲನವು ಮುಸ್ಲಿಂ ವಿರೋಧಿ~ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಅಣ್ಣಾ ಹಜಾರೆ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಿಂದ ಹೊರ ಬಂದ ಕಜ್ಮಿ, ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಮಾಧ್ಯಮಗಳ ಮುಂದೆ ಪ್ರಕಟಿಸಿದರು. `ಅಣ್ಣಾ ತಂಡದ ಪ್ರಮುಖರ ಸಮಿತಿಯಲ್ಲಿ ನಾನೊಬ್ಬನೇ ಮುಸ್ಲಿಂ ಸದಸ್ಯನಿದ್ದು, ನಾನೂ ಹೊರ ಬಂದೆ. ತಂಡದಲ್ಲಿ ಮುಸ್ಲಿಮರು ಇರುವುದು ಅವರಿಗೆ ಬೇಕಾಗಿಲ್ಲ~ ಎಂದು ಕಿಡಿಕಾರಿದರು.

`ಅಣ್ಣಾ ತಂಡದ ಪ್ರಮುಖ ಸದಸ್ಯರಾದ ಅರವಿಂದ ಕೇಜ್ರಿವಾಲ್ ಮತ್ತು ಮನಿಷ್ ಸಿಸೊಡಿಯಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ~ ಎಂದು  ಆರೋಪಿಸಿದರು.

ಸಿಸೊಡಿಯಾ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಚುನಾವಣೆಗೆ ಸ್ಪರ್ಧಿಸಬೇಕೆಂಬ ಬಯಕೆ ಇದೆ. ಹಿಮಾಚಲ ಪ್ರದೇಶದಿಂದ ಅವರು ಗೆದ್ದು ಬರಬೇಕೆಂದು ಪ್ರಯತ್ನ ನಡೆಸಿದ್ದು, ಸಭೆಯಲ್ಲಿ ಇಂತಹ ವಿಷಯಗಳನ್ನು ಚರ್ಚಿಸುವುದು ಸರಿ ಅಲ್ಲ ಎಂದು ನಾನು ವಿರೋಧಿಸಿದೆ~ ಎಂದೂ ಅವರು ದೂರಿದರು.

ಕಲಾಪ ಧ್ವನಿಮುದ್ರಣ: ತಂಡದಿಂದ ಕಜ್ಮಿ ಅವರನ್ನು ಉಚ್ಚಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ ತಂಡದ ಸದಸ್ಯರಾದ ಕುಮಾರ ವಿಶ್ವಾಸ್ ಮತ್ತು ಶಾಜಿಯಾ ಇಲಾಮಿ ಅವರು, `ಕಜ್ಮಿ   ತಮ್ಮ ಮೊಬೈಲ್‌ನಲ್ಲಿ ಸಭೆಯ ಕಲಾಪಗಳನ್ನು ಗುಪ್ತವಾಗಿ ಧ್ವನಿಮುದ್ರಿಸಿಕೊಳ್ಳುತ್ತಿರುವುದು ಪತ್ತೆಯಾಯಿತು~ ಎಂದರು.

`ಈ ಹಿಂದೆ ತಂಡ ನಡೆಸಿದ ಸಭೆಯ ವಿವರಗಳು ಕಜ್ಮಿ ಅವರಿಂದಲೇ ಮಾಧ್ಯಮಗಳಿಗೆ ಸೋರಿಕೆ ಯಾಗುತ್ತಿರುವುದು ಈಗ ದೃಢ ಪಟ್ಟಿದೆ. ಸಭೆಯ ಎಲ್ಲ ಈ ವಿವರಗಳು ಸೋರಿಕೆಯಾಗುತ್ತಿದ್ದರಿಂದ ಆಗ ನಮಗೆ ತುಂಬಾ ಅಚ್ಚರಿ ಉಂಟಾಗುತ್ತಿತ್ತು~ ಎಂದು ಹೇಳಿದರು.

`ಕೇಜ್ರಿವಾಲ್ ಮತ್ತು ಮನಿಷ್ ಸಿಸೊಡಿಯಾ ಅವರು ಈ ಚಳವಳಿಯನ್ನು ತಮ್ಮ ವೈಯಕ್ತಿಕ ಸ್ವತ್ತು ಎಂಬಂತೆ ಬಳಸಿಕೊಳ್ಳುತ್ತಿರುವ ಬಗ್ಗೆ ಅಣ್ಣಾ ಹಜಾರೆ ಅವರಿಗೆ ಅಸಮಾಧಾನವಿದೆ~ ಎನ್ನುವ ಕಜ್ಮಿ ಆಪಾದನೆಗೆ  ಕೇಜ್ರಿವಾಲ್ ಅವರು, `ಇಂಥ ಆರೋಪಕ್ಕೆ ನನ್ನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ~ ಎಂದರು. `ಸಭೆ ಕಲಾಪವನ್ನು ಗುಪ್ತವಾಗಿ ಧ್ವನಿ ಮುದ್ರಿಸಿಕೊಳ್ಳುತ್ತಿರುವುದೇಕೆ~ ಎಂದು  ತಂಡದ ಸದಸ್ಯರು ಸಭೆಯಲ್ಲೇ ಕಜ್ಮಿ ಅವರನ್ನು ಪ್ರಶ್ನಿಸಿದಾಗ, ಅವರು ಹಠಾತ್ತಾಗಿ ಸಭೆಯಿಂದ ಹೊರ ನಡೆದರು ಎಂದು ಮೂಲಗಳು ತಿಳಿಸಿವೆ.

`ಸಭೆಯಿಂದ ಹೊರ ನಡೆಯುವುದು  ಸಭೆಯ ನಿಯಮಗಳಿಗೆ ವಿರುದ್ಧವಾದುದು, ಹೊರ ಹೋಗಬೇಡಿ ನಿಲ್ಲಿ ಎಂದು ನಾವು ಕಜ್ಮಿ ಅವರಿಗೆ ಮನವಿ ಮಾಡಿಕೊಂಡೆವು~ ಎಂದೂ ಇಲಾಮಿ ಮತ್ತು ವಿಶ್ವಾಸ್ ಹೇಳಿದರು.

`ಕಜ್ಮಿ ಕಲಾಪಗಳನ್ನು ಧ್ವನಿ ಮುದ್ರಿಸಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿದ್ದ ಅಖಿಲ್ ಗೊಗೊಯ್ ಮತ್ತು ಗೋಪಾಲ್ ರಾಯ್, ನಮ್ಮ ಗಮನಕ್ಕೆ ತಂದರು. ತಕ್ಷಣ ನಾವು ಅವರ ಮೊಬೈಲ್ ಕಸಿದುಕೊಂಡು ನೋಡಿದಾಗ ಕಲಾಪಗಳ ಬಗ್ಗೆ ಧ್ವನಿ ಮುದ್ರಿಸಿಕೊಂಡ ಮೂರು ತುಣುಕುಗಳಿದ್ದವು. ಈ ಬಗ್ಗೆ ನಾವು ಅವರ ವಿವರಣೆ ಕೇಳಿದರೂ ಅದಕ್ಕೆ ಉತ್ತರಿಸದೇ ನಮ್ಮನ್ನೆಲ್ಲ  ನೂಕಿ ಹೊರ ಹೋದರು~ ಎಂದು ಕುಮಾರ ವಿಶ್ವಾಸ್ ವಿವರಿಸಿದರು.

`ಸಭೆಯ ಕಲಾಪಗಳು ರಹಸ್ಯವಾಗಿರಬೇಕು. ಮುಂದಿನ ಹಲವು ಸಭೆಗಳಿಂದ ದೂರ ಇರುವಂತೆ ಅಣ್ಣಾ ಅವರು ಕಜ್ಮಿ ಅವರಿಗೆ ಸೂಚಿಸಿದ್ದರು. ಆದರೆ, ಅವರು ಹೊರ ಬಂದು ವಿಭಿನ್ನ ಹೇಳಿಕೆ ನೀಡಿದರು~ ಎಂದರು.

ಭ್ರಷ್ಟಾಚಾರ ವಿರುದ್ಧದ ಹೋರಾಟದ ವಿಷಯದಲ್ಲಿ ಬಾಬಾ ರಾಮದೇವ್ ಮತ್ತು ಅಣ್ಣಾ ತಂಡದ ಮಧ್ಯೆ ಬಿರುಕು ಉಂಟಾಗಿದ್ದರಿಂದ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು.

ಈ ಹಿಂದೆ ಅಣ್ಣಾ ಅವರ ವಿರುದ್ಧ ಮಾತನಾಡಿದ ವಿಡಿಯೊ ದೃಶ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದ ಸ್ವಾಮಿ ಅಗ್ನಿವೇಶ್ ಅವರು ಅಣ್ಣಾ ತಂಡ ತ್ಯಜಿಸಿದ್ದರೆ,  ಭಿನ್ನಾಭಿಪ್ರಾಯದಿಂದಾಗಿ ಪಿ.ವಿ. ರಾಜಗೋಪಾಲ ಮತ್ತು ರಾಜಿಂದರ್ ಸಿಂಗ್ ತಂಡವನ್ನು ತ್ಯಜಿಸಿದ್ದರು.
 

14 ಭ್ರಷ್ಟ ಸಚಿವರಿಗೆ ನೋಟಿಸ್

ನೊಯಿಡಾ (ಪಿಟಿಐ): ಕೇಂದ್ರದ 14 ಭ್ರಷ್ಟ ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲು ಚಳವಳಿ ಆರಂಭಿಸುವ ಮೊದಲು ಈ ಸಚಿವರಿಗೆ ನೋಟಿಸ್ ನೀಡಿ ಪ್ರತಿಕ್ರಿಯೆ ಪಡೆಯಲು ಅಣ್ಣಾ ಹಜಾರೆ ತಂಡ ನಿರ್ಧರಿಸಿದೆ.

ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ  ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಸಚಿವರ ಪ್ರತಿಕ್ರಿಯೆಗೆ ಕಾದು ಒಂದು ವಾರದ ನಂತರ ಪತ್ರಿಕಾಗೋಷ್ಠಿಯಲ್ಲಿ ಭ್ರಷ್ಟ ಸಚಿವರ ವಿರುದ್ಧದ ಸಾಕ್ಷ್ಯಾಧಾರಗಳನ್ನು ಬಹಿರಂಗಗೊಳಿಸಲಾಗುತ್ತದೆ ಎಂದು ಪ್ರಶಾಂತ್ ಭೂಷಣ್   ತಿಳಿಸಿದರು.

ತಂಡದ ಪ್ರಮುಖರ ಸಮಿತಿಯ ಸದಸ್ಯರು ಆಯಾ ರಾಜ್ಯಗಳಲ್ಲಿ ಪರಿಣಾಮಕಾರಿ ಲೋಕಪಾಲ ಮಸೂದೆಗೆ ಒತ್ತಾಯಿಸಿ ಚಳವಳಿ ನಡೆಸಲೂ ತೀರ್ಮಾನಿಸಲಾಗಿದೆ ಎಂದರು.

ಮಂಗಳವಾರದಿಂದ ಪುನರಾರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಲೋಕಪಾಲ ಮಸೂದೆ ಅಂಗೀಕಾರವಾಗುವ  ನಿರೀಕ್ಷೆ ತಮಗೆ ಇದೆ ಎಂದು ಕಿರಣ್ ಬೇಡಿ ಹೇಳಿದ್ದಾರೆ.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.