ADVERTISEMENT

`ಅತ್ಯಾಚಾರಕ್ಕೊಳಗಾದ ಮಗುವಿಗೆ ಶಸ್ತ್ರಚಿಕಿತ್ಸೆ'

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 19:59 IST
Last Updated 20 ಏಪ್ರಿಲ್ 2013, 19:59 IST

ನವದೆಹಲಿ(ಪಿಟಿಐ): ನೆರೆಮನೆಯಾತನಿಂದ ಅತ್ಯಾಚಾರ ಮತ್ತು ಹಲ್ಲೆಗೊಳಗಾದ ಐದು ವರ್ಷದ ಹೆಣ್ಣು ಮಗುವಿನ ಆರೋಗ್ಯ ಈಗ ಸ್ಥಿರವಾಗಿದೆ ಎಂದು ವೈದ್ಯರು ಶನಿವಾರ ತಿಳಿಸಿದ್ದಾರೆ.

`ಮಗುವಿನ ಅಂಗಾಂಗಗಳು ಸಾಮಾನ್ಯ ಸ್ಥಿತಿಗೆ ಮರಳಿವೆ; ಈಗ ಮಾತನಾಡುತ್ತಿದ್ದಾಳೆ. ಬಾಲಕಿಯನ್ನು ತೀವ್ರ ನಿಗಾ ಘಟಕದಿಂದ ಸ್ಥಳಾಂತರಿಸಲಾಗಿದ್ದರೂ, ನಿಗಾ ಇರಿಸಲಾಗಿದೆ' ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್) ಅಧೀಕ್ಷಕ ಡಾ. ಡಿ.ಕೆ.ಶರ್ಮಾ ಹೇಳಿದ್ದಾರೆ.

`ಮಗುವಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಆದ್ದರಿಂದ ಸಾಮಾನ್ಯ ಅರಿವಳಿಕೆ ನೀಡಿ ಕೂಲಂಕಷವಾಗಿ ಪರೀಕ್ಷಿಸಿ, ಕೃತಕವಾಗಿ ಮಲ ವಿಸರ್ಜನೆ ನಡೆಸಲು ಶನಿವಾರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ' ಎಂದು ತಿಳಿಸಿದ್ದಾರೆ.

`ಮಗುವಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಬಳಲಿಕೆ ಕಡಿಮೆ ಮಾಡುವ ಔಷಧ ನೀಡಲಾಗಿದೆ. ಮರ್ಮಾಂಗಕ್ಕೆ ಹೆಚ್ಚು ಗಾಯವಾಗಿದೆ. ಬಾಲಕಿಗೆ ತಗುಲಿರುವ ಸೋಂಕು ನಿಯಂತ್ರಣಕ್ಕೆ ಬಂದ ನಂತರ ಮತ್ತೆ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ವಿವರವಾಗಿ ಯೋಜಿಸಲಾಗುವುದು' ಎಂದೂ ಶರ್ಮಾ ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಅವರು ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮಗುವಿನ ಆರೋಗ್ಯ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡ ಅವರು, ಬಾಲಕಿಯ ಪೋಷಕರನ್ನು ಮಾತನಾಡಿಸಿದ್ದಾರೆ.

5ನೇ ಅತ್ಯಾಚಾರ ಪ್ರಕರಣ
ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಸೇರಿದಂತೆ ಈ ತಿಂಗಳಲ್ಲಿ ರಾಜಧಾನಿಯಲ್ಲಿ ಬಾಲಕಿಯರ ಮೇಲೆ ಐದು ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿವೆ. ಈ ವರ್ಷದ ಆರಂಭದಿಂದ ಈವರೆಗೂ ದೆಹಲಿಯಲ್ಲಿ 393 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮಾಹಿತಿಯಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.