ADVERTISEMENT

ಅದಿರು ಗಣಿಗಾರಿಕೆ ತಿಂಗಳಲ್ಲಿ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 19:30 IST
Last Updated 2 ನವೆಂಬರ್ 2012, 19:30 IST

ನವದೆಹಲಿ: ಅದಿರು ಗಣಿಗಾರಿಕೆ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಒಂದು ತಿಂಗಳ ಒಳಗಾಗಿ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.

ನ್ಯಾ. ಅಫ್ತಾಬ್ ಆಲಂ ನೇತೃತ್ವದ ಸುಪ್ರೀಂ ಕೋರ್ಟ್ ಅರಣ್ಯ ಪೀಠವು ಅದಿರು ಗಣಿಗಾರಿಕೆ ಪರವಾನಗಿ ನವೀಕರಣಕ್ಕೆ ಕಾದಿರುವ ಎಲ್ಲ ಅರ್ಜಿಗಳಿಗೆ ಸಂಬಂಧಿಸಿದಂತೆ ತಿಂಗಳೊಳಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ಅದಿರು ಗಣಿಗಾರಿಕೆ ಪರವಾನಗಿ ನವೀಕರಣಕ್ಕೆ ಮನವಿ ಮಾಡಿರುವ ಅರ್ಜಿಗಳು ಸರ್ಕಾರದ ಮುಂದೆ ಒಂದು ವರ್ಷದಿಂದ ಇತ್ಯರ್ಥವಾಗದೆ ಉಳಿದಿವೆ. ಕೆಲವು ಗುತ್ತಿಗೆಗಳ ಪರವಾನಗಿ ಅವಧಿ ಮುಗಿಯುವ ಹಂತದಲ್ಲಿದೆ ಎಂಬ ವಾದವನ್ನು ಆಲಿಸಿದ ಅರಣ್ಯ ಪೀಠ ಈ ಆದೇಶ ನೀಡಿತು.

ಅದಿರು ಕೊರತೆ ಉಕ್ಕು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬೇಕು ಎಂದು ಉಕ್ಕು ತಯಾರಕರ ಸಂಘ ಮಾಡಿದ ಮನವಿ ಮೇಲೆ ನ್ಯಾಯಪೀಠ ಯಾವುದೇ ಆದೇಶ ನೀಡಲಿಲ್ಲ.

ಗಣಿಗಾರಿಕೆಗೆ ಅನುಮತಿ ನೀಡಬೇಕೆಂದು ಉಕ್ಕು ಉತ್ಪಾದಕರು ಮಾತ್ರ ಏಕೆ ಕೇಳುತ್ತಿದ್ದಾರೆ. ಅದಿರು ಗಣಿಗಾರಿಕೆ ನಿಷೇಧದಿಂದ ತೀವ್ರ ತೊಂದರೆಗೆ ಒಳಗಾಗಿರುವ ಗಣಿ ಗುತ್ತಿಗೆದಾರರು ಏಕೆ ಮೌನವಾಗಿದ್ದಾರೆ ಎಂದು ನ್ಯಾಯಪೀಠದ ಮತ್ತಿಬ್ಬರು ಸದಸ್ಯರಾದ ನ್ಯಾ. ಕೆ.ಎಸ್.ರಾಧಾಕೃಷ್ಣನ್ ಹಾಗೂ ನ್ಯಾ. ಸ್ವತಂತ್ರಕುಮಾರ್ ಪ್ರಶ್ನಿಸಿದರು.

ಅವರು ನ್ಯಾಯಾಲಯದ ಮುಂದೆ ಬರದೆ ಇರಲು ಕಾರಣವೇನು? ಇದರ ಹಿಂದಿನ ಒಳಗುಟ್ಟೇನು ಎಂದು ಅರಿಯಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಉಕ್ಕು ತಯಾರಕರ ಸಂಘದ ಪರ ಹಾಜರಾದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ಎ ವರ್ಗದ 18 ಗಣಿಗಳಲ್ಲಿ ಅರಣ್ಯ ಪುನರುಜ್ಜೀವನ ಹಾಗೂ ಪುನರ್ವಸತಿ ಯೋಜನೆ ಷರತ್ತುಗಳನ್ನು ಪೂರೈಸಿರುವ ಎರಡು ಗಣಿಗಳಿಗೆ ಮಾತ್ರ ಶಾಸನಾತ್ಮಕ ಮಂಜೂರಾತಿ ದೊರೆತಿದೆ ಎಂಬ ಸಂಗತಿಯನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಸಂಘದ ಪರ ಹಾಜರಾದ ಮತ್ತೊಬ್ಬ ಹಿರಿಯ ವಕೀಲ ಸಿ.ಯು. ಸಿಂಗ್ ಎನ್‌ಎಂಡಿಸಿ ಹೊರತೆಗೆಯುತ್ತಿರುವ ಅದಿರು ಸಾಕಾಗುತ್ತಿಲ್ಲ. ಇದರಿಂದಾಗಿ ಉಕ್ಕು ಉದ್ಯಮ ಸೊರಗುತ್ತಿದೆ ಎಂದು ವಿವರಿಸಿದರು.

ಆದರೆ, ಈ ವಾದ ಕೋರ್ಟ್ ಮೇಲೆ ಪ್ರಭಾವ ಬೀರಲಿಲ್ಲ. ನಮಗೆ ಉಕ್ಕೂ ಬೇಕು. ಪರಿಸರವೂ ಉಳಿಯಬೇಕು. ಅಮೂಲ್ಯವಾದ ಪರಿಸರ ನಾಶಮಾಡಿ ಉತ್ಪಾದಿಸುವ ಉಕ್ಕಿನ ಅಗತ್ಯ ನಮಗಿಲ್ಲ.

ಗಣಿಗಾರಿಕೆಯಿಂದ ನಾಶವಾಗಿರುವ ಪರಿಸರ ಮಹತ್ವದ ಬಗ್ಗೆ ಅರಿವಿದೆಯೇ ಎಂದು ನ್ಯಾಯಪೀಠ ಕೇಳಿತು. ಗಣಿಗಾರಿಕೆ ಪುನರಾರಂಭಕ್ಕೆ ಅನುಮತಿ ನೀಡುವ ಮೊದಲು ಗುತ್ತಿಗೆದಾರರಿಂದ ಮುಚ್ಚಳಿಕೆ ಪಡೆಯಬಹುದು ಎಂದು ಸಿಂಗ್ ಹೇಳಿದರು.

ಗಣಿ ಗುತ್ತಿಗೆಗಳ ಗಡಿಗಳನ್ನು ಗುರುತಿಸುವ ಕುರಿತು ಕೇಂದ್ರ ಉನ್ನತಾಧಿಕಾರ ಸಮಿತಿ ಮಾಡಿರುವ ಶಿಫಾರಸಿಗೆ ಸಂಬಂಧಿಸಿದಂತೆ ಅಭಿಪ್ರಾಯ ನೀಡುವಂತೆ ನ್ಯಾಯಪೀಠ ಕೇಂದ್ರ, ಕರ್ನಾಟಕ ಹಾಗೂ ಆಂಧ್ರ ಸರ್ಕಾರಕ್ಕೆ ಹೇಳಿತು. ಅನಂತರ ಪ್ರಕರಣದ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.