ADVERTISEMENT

ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್ ತಂತ್ರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2013, 19:30 IST
Last Updated 15 ನವೆಂಬರ್ 2013, 19:30 IST
ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್ ತಂತ್ರ
ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್ ತಂತ್ರ   

ಖರ್ಸಿಯಾ (ಛತ್ತೀಸಗಡ): ಖರ್ಸಿಯಾದಲ್ಲಿ ಅನುಕಂಪದ ಗಾಳಿ ಬೀಸುವುದೇ? ಕಾಂಗ್ರೆಸ್‌ ‘ಕೈ’ ಹಿಡಿಯುವುದೇ? ಎನ್ನುವ ಪ್ರಶ್ನೆ ರಾಜ್ಯ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಈ ಪ್ರಶ್ನೆಗೆ ಉತ್ತರ ಸಿಗಲು ಡಿಸೆಂಬರ್‌ 8ರವರೆಗೆ ಕಾಯಬೇಕು.

ಬಸ್ತರ್ ಜಿಲ್ಲೆ ಜೀರಂ ಘಾಟಿಯಲ್ಲಿ ನಕ್ಸಲರು ಮೇ 25ರಂದು ಕಾಂಗ್ರೆಸ್‌ ನಾಯಕರು  ಪ್ರಯಾಣಿಸುತ್ತಿದ್ದ ಕಾರುಗಳ ಮೇಲೆ ದಾಳಿ ಮಾಡಿ, ಪಿಸಿಸಿ ಅಧ್ಯಕ್ಷ ನಂದಕುಮಾರ್‌ ಪಟೇಲ್‌, ಮಾಜಿ ಸಚಿವರಾದ ವಿ.ಸಿ. ಶುಕ್ಲಾ ಹಾಗೂ ಮಹೇಂದ್ರ ಕರ್ಮ ಸೇರಿದಂತೆ 30 ಜನರನ್ನು ಹತ್ಯೆಗೈದಿದ್ದರು. ಈ ದುರ್ಘಟನೆಯನ್ನು ಜನ ಮರೆಯುವ ಮೊದಲೇ ವಿಧಾನಸಭೆ ಚುನಾವಣೆ ನಡೆಯುತ್ತಿದೆ.

‘ಕಾಂಗ್ರೆಸ್‌ ಅಧ್ಯಕ್ಷ ನಂದಕುಮಾರ್‌, ಅವರ ಹಿರಿಯ ಪುತ್ರ ದಿನೇಶ್‌ ಪಟೇಲ್‌ ಅವರನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ನಮ್ಮಿಂದ ಪ್ರಮಾದವಾಗಿದೆ. ತಂದೆ, ಮಗ ಸೇರಿದಂತೆ ಅನೇಕ ನಾಯಕರು ಗುರಿಯಾಗಿರಲಿಲ್ಲ. ನಕ್ಸಲರ ವಿರುದ್ಧ ಹೋರಾಡಲು ಆದಿವಾಸಿ ಯುವಕರನ್ನು ಬಳಸಿ ಕೊಂಡು ‘ಸಲ್ವಾ ಜುಡುಂ’ ಕಟ್ಟಿದ ಮುಖಂಡರಷ್ಟೇ ನಮಗೆ ಬೇಕಿತ್ತು’ ಎಂದು ಮಾವೋವಾದಿ ಸಂಘಟನೆ ಈಚೆಗೆ ಬಿಡುಗಡೆ ಮಾಡಿದ ಪಶ್ಚಾತ್ತಾಪ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಹತ್ತು ವರ್ಷಗಳಿಂದ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಖರ್ಸಿಯಾ­ದಲ್ಲಷ್ಟೇ ಅಲ್ಲ ಇಡೀ ಛತ್ತೀಸಗಡದಲ್ಲಿ ಅನುಕಂಪದ ಅಲೆ ಎಬ್ಬಿಸಲು ಪ್ರಯತ್ನಿಸಿದೆ. ರಾಜ್ಯದಲ್ಲಿ ತನ್ನ ಸರ್ಕಾರ ರಚಿಸ ಬೇಕೆಂದು ಶತಾಯಗತಾಯ ಪ್ರಯತ್ನಿ ಸುತ್ತಿದೆ. ನಕ್ಸಲರ ದಾಳಿಗೆ ಬಲಿಯಾದ ಕೆಲವು ನಾಯಕರ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಿದೆ.

ರಾಯಗಡ ಜಿಲ್ಲೆ ‘ಖರ್ಸಿಯಾ’ದಲ್ಲಿ ನಂದಕುಮಾರ್‌ ಪಟೇಲ್‌ ಪುತ್ರ ಸಾಫ್ಟ್‌ವೇರ್‌ ಎಂಜಿನಿಯರ್‌ ಉಮೇಶ್‌ ಪಟೇಲ್‌ ಅವರಿಗೆ ಟಿಕೆಟ್‌ ನೀಡಿದೆ. ದಾಂತೆವಾಡದಲ್ಲಿ ಮಹೇಂದ್ರ ಕರ್ಮ ಪತ್ನಿ ದೇವಕಿ ಕರ್ಮ ಅದೃಷ್ಟ ಪಣಕ್ಕಿ ಟ್ಟಿದ್ದಾರೆ. ಮುಖ್ಯಮಂತ್ರಿಗಳ ರಾಜನಂದಗಾಂವ್‌ ಕ್ಷೇತ್ರದಲ್ಲಿ ಮಾಜಿ ಶಾಸಕ ಉದಯ ಮೊದಲಿಯಾರ್‌ ಪತ್ನಿ ಅಲ್ಕಾ ಮೊದಲಿಯಾರ್‌ ಪರೀಕ್ಷೆ ಮುಗಿಸಿ, ಫಲಿತಾಂಶದ ನಿರೀಕ್ಷೆಯ­ಲ್ಲಿದ್ದಾರೆ.
ಮೊದಲ ಹಂತದಲ್ಲಿ ರಾಜನಂದ­ಗಾಂವ್‌, ದಾಂತೇವಾಡದ ಚುನಾವಣೆ ಮುಗಿದಿದೆ. ಇದೇ 19ರಂದು ಖರ್ಸಿಯಾ ಒಳಗೊಂಡಂತೆ 72­ಕ್ಷೇತ್ರಗಳಿಗೆ ಮತದಾನವಾಗಲಿದೆ.

2003 ಮತ್ತು 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ ಆಡಳಿತ ಪಕ್ಷವು ಬಿಜೆಪಿಗೆ ಈ ಕ್ಷೇತ್ರಗಳಲ್ಲಿ ಸಮ ಬಲದ ಸ್ಪರ್ಧೆಯೊಡ್ಡಿತ್ತು. ಈ ಚುನಾವಣೆಯಲ್ಲೂ ಎರಡು ಪ್ರಮುಖ ಪಕ್ಷಗಳ ಮಧ್ಯೆ ತೀವ್ರ ಹಣಾಹಣಿ ನಡೆಯುತ್ತಿದೆ. ನಂದಕುಮಾರ್‌ ರಾಜ್ಯದ ಜನಪ್ರಿಯ ನಾಯಕ. ಅವರೀಗ ಬದುಕಿದ್ದು ಕಾಂಗ್ರೆಸ್‌ ಬಹುಮತ ಪಡೆದಿದ್ದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಆಗುತ್ತಿದ್ದರು.

1990ರಿಂದ 2008­ರವರೆಗೆ ಖರ್ಸಿಯಾದಿಂದ ಸತತ ಐದು ಬಾರಿ ವಿಧಾನಸಭೆ ಚುನಾವಣೆ ಗೆದ್ದಿದ್ದರು. ಇದು ಅವರ ಜನಪ್ರಿಯತೆಗೆ ಸಾಕ್ಷಿ. ಅವಿಭಜಿತ ಮಧ್ಯ ಪ್ರದೇಶ ಹಾಗೂ ಛತ್ತೀಸಗಡ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದರು. ಈಗ ಕಾಂಗ್ರೆಸ್‌ ಉಮೇಶ್‌ ಪಟೇಲ್‌ ಅವರಿಗೆ ಬಲವಂತವಾಗಿ ಟಿಕೆಟ್‌ ನೀಡಿದೆ. ಬಿಜೆಪಿ ಡಾ. ಜವಾಹರಲಾಲ್‌ ನಾಯಕ್‌ ಅವರನ್ನು ಕಣಕ್ಕಿ ಳಿಸಿದೆ. ಬಹುಜನ ಸಮಾಜ ಪಕ್ಷ, ಎನ್‌ಸಿಪಿ, ಎಸ್‌ಪಿ ಸೇರಿದಂತೆ ಎಂಟು ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಇದ್ದಾರೆ.

ನಂದಕುಮಾರ್‌ ಅನುಕಂಪದ ಅಲೆ ಉಮೇಶ್‌ ಕೈ ಹಿಡಿಯಲಿದೆ ಎನ್ನುವ ಮಾತು ಖರ್ಸಿಯಾ ಕ್ಷೇತ್ರದಲ್ಲಿ ಕೇಳಿಬರುತ್ತದೆ. ಬಿಜೆಪಿಯ ನಾಯಕ್‌ ಹೊರಗಿನವರು ಎನ್ನುವ ಅಭಿಪ್ರಾಯ­ವಿದೆ. ‘ಬಿಜೆಪಿ ಸರ್ಕಾರ ಜಾತಿ ರಾಜಕಾರಣ ಮಾಡು ತ್ತಿದೆ. ದಲಿತರು, ಹಿಂದುಳಿ­ದವರನ್ನು  ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ತುಂಬಿ ತುಳುಕುತ್ತಿದೆ.

ಇದರಿಂದ ಜನ ಬೇಸತ್ತಿದ್ದಾರೆ’ ಎಂದು ಖರ್ಸಿಯಾದ ಲಕ್ಷ್ಮೀಕಾಂತ್‌ ಪಾಂಡೆ ಆರೋಪ ಮಾಡುತ್ತಾರೆ. ರಮಣ್‌ಸಿಂಗ್‌ ಸರ್ಕಾರದ ಸಾಧನೆಗಳನ್ನು ಪಟ್ಟಿ  ಮಾಡುವ ಮತದಾರರ ಸಂಖ್ಯೆಯೂ ದೊಡ್ಡದಿದೆ. 2008ರ ಚುನಾವಣೆಯಲ್ಲಿ ನಂದ­ಕುಮಾರ್‌ ಪಟೇಲ್‌ 35 ಸಾವಿರ ಮತಗಳ ಅಂತರದಿಂದ ಇಲ್ಲಿಂದ ಆಯ್ಕೆಗೊಂಡಿದ್ದರು. ಈಗ ಮಗನ ಭವಿಷ್ಯ ಏನಾಗಬಹುದು ಎಂದು ಅರಿಯಲು ಖರ್ಸಿಯಾದ ಜನ ತುದಿಗಾಲಲ್ಲಿ ನಿಂತಿದ್ದಾರೆ. ಉಮೇಶ್‌ ಕ್ಷೇತ್ರದಲ್ಲಿ ಬಿಡುವಿಲ್ಲದ ಪ್ರಚಾರ ಮಾಡುತ್ತಿದ್ದಾರೆ.

ಜಿಲ್ಲೆಯ ಉಳಿದ ಕ್ಷೇತ್ರಗಳಾದ ರಾಯಗಡ, ಲೈಲುಂಗ, ಸಾರಂಗಡ, ಧರಂಜೈಗಡ ಕ್ಷೇತ್ರಗಳು ನಂದಕುಮಾರ್‌ ಪಟೇಲರ ಅನುಕಂಪದ ಲಾಭ ಪಡೆಯಲು ತಂತ್ರ ರೂಪಿಸುತ್ತಿವೆ.

ADVERTISEMENT

ಜಸ್‌ಪುರ: ಪಕ್ಕದ ಜಸ್‌ಪುರ ಜಿಲ್ಲೆಯ ಚಂದ್ರಪುರ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೊಬ್ಬ ಪ್ರಭಾವಿ  ರಾಜಕಾರಣಿ ಬಿಜೆಪಿಯ ದಿಲೀಪ್‌ಸಿಂಗ್‌ ಜುದೇವ್‌ ಪುತ್ರ ಯುದ್ಧವೀರ್‌ ಸಿಂಗ್‌ ಜುದೇವ್‌ ಕಣದಲ್ಲಿದ್ದಾರೆ. ಕಾಂಗ್ರೆಸ್‌ ನೋವೆಲ್‌ ವರ್ಮ ಅವರಿಗೆ ಟಿಕೆಟ್‌ ನೀಡಿದೆ. ಜಸ್‌ಪುರ ರಾಜಮನೆತನಕ್ಕೆ ಸೇರಿದ ದಿಲೀಪ್‌ಸಿಂಗ್‌ ಈಚೆಗಷ್ಟೇ ನಿಧನ-­ರಾಗಿದ್ದಾರೆ.  ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಜುದೇವ್‌ 2003ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಗಣಿ ಹಗರಣದಲ್ಲಿ ಲಂಚ ಪಡೆದ ಆರೋಪ ಹೊತ್ತು ಸ್ವಲ್ಪದರಲ್ಲಿ ಅವಕಾಶ ಕಳೆದುಕೊಂಡರು.

ದಿಲೀಪ್‌ ಸಿಂಗ್‌ ಪುತ್ರ ಯುದ್ಧವೀರ್‌­ಸಿಂಗ್‌ ಚಂದ್ರಾಪುರದಿಂದ ಪುನಃ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು 17 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಪಡೆದಿದ್ದರು. ತಂದೆಯ ಜನಪ್ರಿಯತೆ ಪುತ್ರನಿಗೆ ಬಂಡವಾಳ. ಅಷ್ಟೇ ಅಲ್ಲ, ಜಸ್‌ಪುರ ಭಾಗದಲ್ಲಿ ದಿಲೀಪ್‌ ಸಿಂಗ್‌ ದೊಡ್ಡ ಶಕ್ತಿ. ಈಗ ಅವರಿಲ್ಲದೆ ಇರುವುದು ಬಿಜೆಪಿಗೆ ದೊಡ್ಡ ನಷ್ಟ ಎಂಬುದು ಸ್ಥಳೀಯರ ಅಭಿಪ್ರಾಯ.

ದಿಲೀಪ್ ಸಿಂಗ್‌ ಜುದೇವ್‌ ಅವರಿಲ್ಲದೆ ಚುನಾವಣೆಗೆ ಹೋಗುವುದು ದೊಡ್ಡ ಕಷ್ಟ. ಆದರೆ, ಮತದಾರರು ತಮಗೆ ಬೆಂಬಲ ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಯುದ್ಧವೀರ್‌ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.