ADVERTISEMENT

ಅಪರಾಧ ಹಿನ್ನೆಲೆಯ 14 ಶಾಸಕರು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST

ಶಿಮ್ಲಾ:  ಹಿಮಾಚಲ ಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿರುವ ಒಟ್ಟು 68 ನೂತನ ಸದಸ್ಯರ ಪೈಕಿ 14 ಶಾಸಕರ ವಿರುದ್ಧ ಅಪರಾಧ ಪ್ರಕರಣಗಳಿವೆ. 2007ರಲ್ಲಿ ಅಪರಾಧ ಪ್ರಕರಣ ಹೊಂದಿದ್ದ ಶಾಸಕರ ಸಂಖ್ಯೆ 26 ಇತ್ತು.

ಹಿಮಾಚಲ ಪ್ರದೇಶ ಚುನಾವಣಾ ಕಾವಲು ಪಡೆ (ಎಚ್‌ಪಿಇಡಬ್ಲ್ಯೂ)  ನೂತನ ಶಾಸಕರ ಪ್ರಮಾಣ ಪತ್ರಗಳನ್ನು ವಿಶ್ಲೇಷಿಸಿ ಶಾಸಕರ ವಿರುದ್ಧದ ಅಪರಾಧ ಪ್ರಕರಣಗಳು, ಆರ್ಥಿಕ ಸ್ಥಿತಿಗತಿ ಮತ್ತು ಅವರ ಹಿನ್ನೆಲೆ ಕುರಿತು ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ಬಹಿರಂಗಪಡಿಸಿದೆ.

ಕಾಂಗ್ರೆಸ್‌ನ  36 ಶಾಸಕರ ಪೈಕಿ 10, ಬಿಜೆಪಿಯ 26 ಶಾಸಕರಲ್ಲಿ ಮೂವರ ವಿರುದ್ಧ ಅಪರಾಧ ಪ್ರಕರಣಗಳಿವೆ.

ಐವರು ಶಾಸಕರ ವಿರುದ್ಧ ಅಪಹರಣ, ಆತ್ಮಹತ್ಯೆಗೆ ಕುಮ್ಮಕ್ಕು, ಖೊಟ್ಟಿ ಪತ್ರ ಸೃಷ್ಟಿ ಸೇರಿದಂತೆ ಇತರ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಿವೆ. ಇದರಲ್ಲಿ ಕಾಂಗ್ರೆಸ್‌ನ 3 ಮತ್ತು ಬಿಜೆಪಿಯ ಇಬ್ಬರು ಶಾಸಕರಿದ್ದಾರೆ. ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಏಳು ಜನ ಶಾಸಕರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇಬ್ಬರು ಶಾಸಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿವೆ.

ಕೋಟ್ಯಧಿಪತಿಗಳು: ಒಟ್ಟು ಶಾಸಕರ ಪೈಕಿ 44 ಶಾಸಕರು ಕೋಟ್ಯಧಿಪತಿಗಳಾಗಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನ 26, ಬಿಜೆಪಿಯ 13 ಶಾಸಕರಿದ್ದಾರೆ. ಇದೇ ವೇಳೆ ಒಟ್ಟು ಶಾಸಕರಲ್ಲಿ 11 ಶಾಸಕರ ಆಸ್ತಿ ರೂ 50 ಲಕ್ಷಕ್ಕಿಂತಲೂ ಕಡಿಮೆ ಇದೆ. 10 ಜನ ಶಾಸಕರಿಗೆ ರೂ 50 ಲಕ್ಷ ಸಾಲ ಇದೆ. ಮೂವರು ಶಾಸಕರು ತಮ್ಮ `ಪ್ಯಾನ್' ಕಾರ್ಡ್ ವಿವರ ಸಲ್ಲಿಸದಿರುವುದು ತಿಳಿದು ಬಂದಿದೆ.

2007ರಲ್ಲಿ 15 ಶಾಸಕರು `ಪ್ಯಾನ್ ಕಾರ್ಡ್' ವಿವರ ಸಲ್ಲಿಸಿರಲಿಲ್ಲ. ನಾಲ್ಕು ಮಂದಿ ಶಾಸಕರು ಆದಾಯ ತೆರಿಗೆ ಪಾವತಿ ವಿವರ ಸಲ್ಲಿಸಿಲ್ಲ. ಚುನಾಯಿತರಲ್ಲಿ  ಶೇ 56ರಷ್ಟು  ಶಾಸಕರು ಪದವಿ ಅಥವಾ ಅದಕ್ಕಿಂತಲೂ ಹೆಚ್ಚಿನ ವಿದ್ಯಾರ್ಹತೆ ಪಡೆದಿದ್ದಾರೆ. ಮಹಿಳೆಯರ ಪ್ರಾತಿನಿಧ್ಯ ಕೇವಲ ಶೇ 4ರಷ್ಟು, ಅಂದರೆ ಮೂವರು ಶಾಸಕಿಯರಿದ್ದಾರೆ.

2007ರಲ್ಲಿ ಈ ಸಂಖ್ಯೆ 5 ಇತ್ತು. 18 ಶಾಸಕರ ವಯಸ್ಸು 61ಕ್ಕಿಂತಲೂ ಹೆಚ್ಚಿದೆ. ನೂತನ ಶಾಸಕರ ಸರಾಸರಿ ಆಸ್ತಿ ರೂ 7.63 ಕೋಟಿ  ಇದೆ. 2007ರಲ್ಲಿ ಇದು ರೂ 3.59 ಕೋಟಿ  ಇತ್ತು. ಅಂದರೆ 2012ರಲ್ಲಿ ಪುನಃ ಚುನಾವಣೆಗೆ ಸ್ಪರ್ಧಿಸಿರುವ ಶಾಸಕರ ಆಸ್ತಿಯಲ್ಲಿ ಸರಾಸರಿ ರೂ  4.3 ಕೋಟಿಗಳಷ್ಟು ಬೆಳವಣಿಗೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.