ADVERTISEMENT

‘ಅಭಿವೃದ್ಧಿ–ವಂಶಾಭಿವೃದ್ಧಿ ನಡುವಣ ಹೋರಾಟ’

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಅಹಮದಾಬಾದ್‌: ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಗುಜರಾತ್‌ ಚುನಾವಣೆಯು ಅಭಿವೃದ್ಧಿ ಮತ್ತು ವಂಶಾಭಿವೃದ್ಧಿ ನಡುವಣ ಹೋರಾಟ ಎಂದು ಬಣ್ಣಿಸಿದರು.

ಕಾಂಗ್ರೆಸ್‌ ಅನ್ನು ‘ಗುಜರಾತ್‌ –ವಿರೋಧಿ’ ಎಂದು ಕರೆದಿರುವ ಅವರು, ಅಭಿವೃದ್ಧಿಯ ವಿಷಯವನ್ನು ಇಟ್ಟುಕೊಂಡು ಚುನಾವಣೆ ಎದುರಿಸುವಂತೆ ಆ ಪಕ್ಷದ ಮುಖಂಡರಿಗೆ ಸವಾಲು ಹಾಕಿದರು.

ಗಾಂಧಿನಗರದಲ್ಲಿ ಪಕ್ಷ ಆಯೋಜಿಸಿದ್ದ ಗುಜರಾತ್‌ ಗೌರವ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೋದಿ, ‘ಅವರು (ಕಾಂಗ್ರೆಸ್ಸಿಗರು) ದೇಶವನ್ನು ಲೂಟಿ ಮಾಡಿದ್ದಾರೆ. ನನಗೆ ಪಕ್ಷಕ್ಕಿಂತ ದೇಶ ದೊಡ್ಡದು. ನನಗೆ ದೇಶದ ಭವಿಷ್ಯವೇ ಮುಖ್ಯ... ನಮಗೆ ಈ ಚುನಾವಣೆಯು ಅಭಿವೃದ್ಧಿಗಾಗಿ ಆದರೆ, ಅವರಿಗೆ ಇದು ವಂಶಾಡಳಿತವನ್ನು ಮುಂದುವರೆಸುವುದಕ್ಕಾಗಿ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್‌ ಬೊಗಳುತ್ತಾ ಇರುತ್ತದೆ. ಕಾಂಗ್ರೆಸ್‌ ಪಕ್ಷವು ಒಂದಲ್ಲ ಒಂದು ದಿನ ಅಭಿವೃದ್ಧಿ ವಿಷಯವನ್ನು ಆಧರಿಸಿ ಚುನಾವಣೆ ಎದುರಿಸುತ್ತದೆ ಎಂಬ ಆಶಯ ನನಗೆ ಇತ್ತು. ಆದರೆ, ಅದು ಯಾವತ್ತೂ ಕೋಮುವಾದ, ಜಾತೀಯತೆ ಅಥವಾ ಜನರನ್ನು ತಪ್ಪು ದಾರಿಗೆ ಎಳೆಯುದಕ್ಕೇ ಗಮನ ನೀಡುತ್ತಾ ಬಂದಿದೆ. ಅಭಿವೃದ್ಧಿಯ ಕಾರ್ಯಸೂಚಿಯಲ್ಲಿ ಚುನಾವಣೆ ಎದುರಿಸೋಣ ಎಂದು ನಾನು ಅವರಿಗೆ ಸವಾಲು ಹಾಕುತ್ತೇನೆ’ ಎಂದು ಅವರು ಹೇಳಿದರು.

ಬಿಜೆಪಿಯು ದಲಿತರ, ಇತರ ಹಿಂದುಳಿದ ವರ್ಗಗಳ, ಆದಿವಾಸಿಗಳ ವಿರೋಧಿ ಮತ್ತು ಅದೊಂದು ನಗರ ಕೇಂದ್ರಿತ ಪಕ್ಷ ಎಂಬ ಆರೋಪ ಇದ್ದರೂ ಅತೀ ಹೆಚ್ಚಿನ ಸಂಖ್ಯೆಯ ದಲಿತ, ಇತರೆ ಹಿಂದುಳಿದ ವರ್ಗಗಳ, ಆದಿವಾಸಿ ಮತ್ತು ಕೃಷಿ ಸಮುದಾಯಕ್ಕೆ ಸೇರಿದ ಸಂಸದರು ಬಿಜೆಪಿಯಲ್ಲಿದ್ದಾರೆ ಅವರು ಹೇಳಿದರು.

‘ಗುಜರಾತ್‌ ಎಂದರೆ ಆ ಪಕ್ಷಕ್ಕೆ ಯಾವತ್ತೂ ಆಗಿ ಬರುವುದಿಲ್ಲ. ಇತಿಹಾಸವೇ ಅದಕ್ಕೆ ಸಾಕ್ಷಿ. ಸರ್ದಾರ್‌ ಪಟೇಲ್‌, ಅವರ ಮಗಳು ಮನಿಬೆನ್‌ ಪಟೇಲ್‌, ಮೊರಾರ್ಜಿ ದೇಸಾಜಿ, ಬಾಬುಭಾಯಿ ಜಶ್‌ಬಾಯಿ ಪಟೇಲ್ ಅವರನ್ನು ಅದು ನಡೆಸಿಕೊಂಡ ರೀತಿಯನ್ನು ನೋಡಿದರೆ ಗೊತ್ತಾಗುತ್ತದೆ. ರಾಜ್ಯದಲ್ಲಿ 149 ಸ್ಥಾನಗಳನ್ನು ಗೆದ್ದಿದ್ದ ಮಾಧವ್‌ಸಿನ್ಹ ಸೋಲಂಕಿಯವರನ್ನೂ ಅದು ಕೆಟ್ಟದಾಗಿ ನಡೆಸಿಕೊಂಡಿತ್ತು’ ಎಂದು ಅವರು ಕಾಂಗ್ರೆಸ್‌ ಅನ್ನು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.