ADVERTISEMENT

ಅಮೆರಿಕ ಪ್ರವಾಸಿ ಮೇಲೆ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 19:59 IST
Last Updated 4 ಜೂನ್ 2013, 19:59 IST

ನವದೆಹಲಿ (ಪಿಟಿಐ): ಭಾರತ ಪ್ರವಾಸಕ್ಕೆ ಬಂದಿದ್ದ ಅಮೆರಿಕ ಯುವತಿಯೊಬ್ಬರ ಮೇಲೆ ಟ್ರಕ್ ಚಾಲಕ ಹಾಗೂ ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ ಮನಾಲಿಯಲ್ಲಿ ನಡೆದಿದೆ.

ಲಿಫ್ಟ್ ಕೊಡುವ ನೆಪದಲ್ಲಿ 30 ವರ್ಷದ ಮಹಿಳೆಯನ್ನು ಸೋಮವಾರ ರಾತ್ರಿ ಹತ್ತಿಸಿಕೊಂಡ ಟ್ರಕ್ ಚಾಲಕ ಮತ್ತಿತರರು ನಂತರ ಆಕೆಯ ಮೇಲೆ ಟ್ರಕ್‌ನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಗಳಿಗಾಗಿ ಪತ್ತೆಕಾರ್ಯ ಚುರುಕುಗೊಳಿಸಲಾಗಿದೆ.

ವೈದ್ಯಕೀಯ ಪರೀಕ್ಷೆಗಳ ವರದಿಗಳಿಂದ ಅತ್ಯಾಚಾರ ನಡೆದಿರುವುದು ದೃಢಪಟ್ಟಿದ್ದು ಟ್ರಕ್‌ನ ನೋಂದಣಿ ಸಂಖ್ಯೆ ಯುವತಿಗೆ ಗೊತ್ತಿಲ್ಲ. ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ. ತನಿಖೆಯ ಭಾಗವಾಗಿ ಮನಾಲಿಯ ಎಲ್ಲ ಟ್ರಕ್ ಚಾಲಕರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ವರದಿ ಮಾಡಿಕೊಳ್ಳಲು ಆದೇಶ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ
ಇದೇ ವೇಳೆ, ವ್ಯಾಪಕ ಪ್ರತಿಭಟನೆಗೆ ಕಾರಣವಾದ ದೆಹಲಿಯ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸೇರಿದಂತೆ ಇತ್ತೀಚಿನ ಲೈಂಗಿಕ ದಾಳಿ ವಿದ್ಯಮಾನಗಳಿಂದಾಗಿ ಭಾರತಕ್ಕೆ ಭೇಟಿ ನೀಡುವ ವಿದೇಶಿ ಮಹಿಳೆಯರ ಸಂಖ್ಯೆಯಲ್ಲಿ ಶೇ35ರಷ್ಟು ಇಳಿಮುಖವಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.

ದೆಹಲಿ ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ವಿರುದ್ಧ ದೇಶದೆಲ್ಲೆಡೆ ಮಾತ್ರವಲ್ಲದೆ ಜಾಗತಿಕವಾಗಿಯೂ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು.

ಈ ಸಂಬಂಧ ಸಮೀಕ್ಷಾ ವರದಿ ನೀಡಿರುವ ಭಾರತದ ವಾಣಿಜ್ಯ ಸಂಸ್ಥೆಗಳ ಒಕ್ಕೂಟ, ದೆಹಲಿಯಲ್ಲಿ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಭಾರತಕ್ಕೆ ಭೇಟಿ ನೀಡುವ ಮಹಿಳಾ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಎಂದು ತಿಳಿಸಿದೆ.

ಸ್ವಿಟ್ಜರ್‌ಲೆಂಡ್ ಸೈಕ್ಲಿಸ್ಟ್ ಯುವತಿ ಮೇಲೆ ಕಳೆದ ಮಾರ್ಚ್‌ನಲ್ಲಿ ಮಧ್ಯಪ್ರದೇಶದಲ್ಲಿ ಅತ್ಯಾಚಾರ ನಡೆದಿದ್ದರೆ, ಇದೇ ರಾಜ್ಯದಲ್ಲಿ ಜನವರಿ ತಿಂಗಳಲ್ಲಿ ಹೋಟೆಲ್‌ನಲ್ಲಿ ತಂಗಿದ್ದ ದಕ್ಷಿಣ ಕೊರಿಯಾ ಮಹಿಳೆ ಮೇಲೆ ಅದೇ ಹೋಟೆಲ್ ಮಾಲೀಕನ ಮಗ ಅತ್ಯಾಚಾರ ಎಸಗಿದ್ದ ಪ್ರಕರಣಗಳು ದಾಖಲಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.