ADVERTISEMENT

ಅಮೋನಿಯಂ ನೈಟ್ರೇಟ್ ಮೇಲೆ ನಿಗಾ

ಬೆಂಗಳೂರು ಸ್ಫೋಟ: ಎನ್‌ಸಿಟಿಸಿಗೆ ಶಿಂಧೆ ಒಲವು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 19:59 IST
Last Updated 22 ಏಪ್ರಿಲ್ 2013, 19:59 IST

ನವದೆಹಲಿ: ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಈಚೆಗೆ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಗೃಹ ಸಚಿವ ಸುಶೀಲಕುಮಾರ ಶಿಂಧೆ, ರಾಜ್ಯಗಳ ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸಲು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ) ಆರಂಭಿಸುವ ಅಗತ್ಯ ಒತ್ತಿಹೇಳಿದರು.

ಬೆಂಗಳೂರು ಸ್ಫೋಟದಲ್ಲಿ ಬಳಕೆಯಾಗಿರುವ ಅಮೋನಿಯಂ ನೈಟ್ರೇಟ್ ರಾಸಾಯನಿಕ ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದ್ದು, ರಾಜ್ಯಗಳೇ ಜವಾಬ್ದಾರಿ ಹೊತ್ತುಕೊಳ್ಳಬೇಕು. ಆದರೆ ಅವುಗಳು ಈ ಕಾರ್ಯ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳು ನಿಗಾ ವಹಿಸುತ್ತಿಲ್ಲ ಎಂದು ಅವರು ಆಕ್ಷೇಪಿಸಿದರು.

ಅಮೋನಿಯಂ ನೈಟ್ರೇಟ್ ಕಾನೂನು-2012ನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ  ಅಗತ್ಯ ಇದೆ. ಈ ಕಾನೂನು ಜಾರಿಗೆ ಮೊದಲು ಅಮೋನಿಯಂ ನೈಟ್ರೇಟ್ ದೇಶದೆಲ್ಲೆಡೆ ಮುಕ್ತವಾಗಿ ಲಭ್ಯವಾಗುತ್ತಿತ್ತು. ಪುಣೆಯ ಜರ್ಮನ್ ಬೇಕರಿ, ದೆಹಲಿಯ ಜಾಮಾ ಮಸೀದಿ ಮತ್ತಿತರ ಕಡೆಗಳಲ್ಲಿ ನಡೆದ ಸ್ಫೋಟದಲ್ಲಿ ಇದೇ ರಾಸಾಯನಿಕ ಬಳಕೆಯಾಗಿದೆ ಎಂದರು. ದೇಶದಲ್ಲಿ ಒಂದೆಡೆಯಿಂದ ಇನ್ನೊಂದೆಡೆ ಈ ಸ್ಫೋಟಕ ಸಾಗಿಸುವಾಗ ಬಂದೋಬಸ್ತ್ ಮಾಡಬೇಕು. ಅದು ಎಲ್ಲಿ ಹೋಗುತ್ತದೆ ಎನ್ನುವುದರ ಮೇಲೆ ಕಣ್ಣಿಡಬೇಕು ಎಂದು ರಾಜ್ಯಗಳಿಗೆ ಮನವಿ ಮಾಡಿದರು.

`ರಾಜ್ಯಗಳ ಗುಪ್ತಚಾರ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯತೆ ಇದ್ದು, ರಾಜ್ಯಗಳಿಗೆ ನಾವು ಸಲಹೆ ನೀಡುತ್ತಿದ್ದೇವೆ. ಆದರೆ ಈ ವಿಷಯದಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ. ಆದಷ್ಟು ಬೇಗ ಎನ್‌ಸಿಟಿಸಿಯನ್ನು ಆರಂಭಿಸುವ ಅಗತ್ಯ ಇದೆ. ರಾಜ್ಯಗಳ ಆಕ್ಷೇಪಗಳನ್ನು ಆಲಿಸುವ ಪರಿಷ್ಕೃತ ಎನ್‌ಸಿಟಿಸಿ ಇದೀಗ ಸಿದ್ಧವಾಗಿದೆ' ಎಂದರು.

ಎನ್‌ಸಿಟಿಸಿ ಆರಂಭದಿಂದ ಸಂವಿಧಾನದ ಸಂಯುಕ್ತ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ಆತಂಕವನ್ನು ಹಲವು ರಾಜ್ಯಗಳು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಶಿಂಧೆ ಈ ಸ್ಪಷ್ಟನೆ ನೀಡಿದರು.

ಬೆಂಗಳೂರು ಸ್ಫೋಟಕ್ಕೆ ಸಂಬಂಧಿಸಿದಂತೆ ನಡೆಸಲಾದ ಪ್ರಾಥಮಿಕ ತನಿಖೆಯಂತೆ, ಬಿಜೆಪಿ ಕಚೇರಿ ಬಳಿ ನಿಲ್ಲಿಸಲಾಗಿದ್ದ ಬೈಕ್ ಒಂದರಲ್ಲಿ ಸ್ಫೋಟಕ ಇಡಲಾಗಿದ್ದು 11 ಪೊಲೀಸರು ಸೇರಿ 16 ಜನ ಗಾಯಗೊಂಡಿದ್ದು ಯಾರೂ ಮೃತಪಟ್ಟಿಲ್ಲ. 50 ಜನ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.