ಮುಂಬೈ (ಪಿಟಿಐ): ಅರಣ್ಯ ಸಂರಕ್ಷಣೆಗೆ ಒತ್ತು ನೀಡಿರುವ ಮಹಾರಾಷ್ಟ್ರ ಸರ್ಕಾರ, ಕಾಡಿನ ಸಂರಕ್ಷಣೆಯಲ್ಲಿ ತೊಡಗಿರುವ `ಗ್ರಾಮ ಅರಣ್ಯ ನಿರ್ವಹಣಾ ಸಮಿತಿ~ ಸದಸ್ಯರಿಗೆ ರಿಯಾಯ್ತಿ ದರದಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ನೀಡಲು ನಿರ್ಧರಿಸಿದೆ.
ಈ ನಿರ್ಧಾರವನ್ನು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. 50 ಹೆಕ್ಟೇರ್ ವ್ಯಾಪ್ತಿಯ ಅರಣ್ಯವನ್ನು ಸಂರಕ್ಷಿಸುತ್ತಿರುವ ಸಮಿತಿ ಸದಸ್ಯರಿಗೆ ಶೇ. 75ರಷ್ಟು ರಿಯಾಯ್ತಿ ದರದಲ್ಲಿ ಎಲ್‌ಪಿಜಿ ಸೌಕರ‌್ಯ ದೊರಕಲಿದೆ. ಮರ ರಕ್ಷಣೆ ಮತ್ತು ಅವುಗಳ ವೃದ್ಧಿಗೆ ಶ್ರಮಿಸುವವರಿಗೆ ಪ್ರತಿ ಮರಕ್ಕೆ ತಿಂಗಳಿಗೆ ಐದು ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಜೊತೆಗೆ ಜೈವಿಕ ಅನಿಲ ಘಟಕ ಸ್ಥಾಪಿಸುವ ಉದ್ದೇಶ ಹೊಂದಿದವರಿಗೆ ಅನುದಾನ ಕೂಡ ನೀಡಲಾಗುತ್ತದೆ.
ರಾಜ್ಯದ ಅರಣ್ಯ ಪ್ರದೇಶದಲ್ಲಿ 15,500 ಗ್ರಾಮಗಳಿದ್ದು, ಇವುಗಳಲ್ಲಿ ಬುಡಕಟ್ಟು ಜನರ ನೆಲೆಗಳೇ ಹೆಚ್ಚಾಗಿವೆ. ಅರಣ್ಯದಂಚಿನ ಗ್ರಾಮಸ್ಥರು ಊರುವಲಿಗಾಗಿ ಕಾಡನ್ನು ಅವಲಂಬಿಸುವುದನ್ನು ತಪ್ಪಿಸಲು ರಾಜ್ಯ ಈ ಯೋಜನೆ ರೂಪಿಸಿದೆ.
ಸುಮಾರು12,600 `ಗ್ರಾಮ ಅರಣ್ಯ ನಿರ್ವಹಣಾ ಸಮಿತಿ~ಗಳನ್ನು ರಚಿಸಲಾಗಿದ್ದು, ಗ್ರಾಮಸ್ಥರೇ ಇದರ ಸದಸ್ಯರಾಗಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.