ನವದೆಹಲಿ (ಐಎಎನ್‌ಎಸ್): ಕಳೆದ ಫೆಬ್ರವರಿಯಲ್ಲಿ ನಡೆದ ಚುನಾವಣೆಯ ಪ್ರಚಾರದ ವೇಳೆ ಸಂಸದರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಅವರಿಗೆ ಶನಿವಾರ ಲೋಕಸಭೆಯ ಸಚಿವಾಲಯವು ಹಕ್ಕುಚ್ಯುತಿ ನೋಟಿಸ್ ಜಾರಿ ಮಾಡಿದೆ.
ಚುನಾವಣಾ ಪ್ರಚಾರದ ವೇಳೆ ಕೇಜ್ರಿವಾಲ್ ಅವರು ಸಂಸದರನ್ನು `ಅತ್ಯಾಚಾರಿಗಳು, ಹಂತಕರು ಹಾಗೂ ಲೂಟಿಕೋರರು~ ಎಂದು ಹೇಳಿದ್ದು, ಅವರ ವಿರುದ್ದ ಕ್ರಮ ಜರುಗಿಸುವಂತೆ ಮಧ್ಯಪ್ರದೇಶದ ಕಾಂಗ್ರೆಸ್ ಸಂಸದ ಸಜ್ಜನ್ ಸಿಂಗ್ ವರ್ಮಾ ಅವರು ಮಾರ್ಚ್ 12 ರಂದು ಸಚಿವಾಲಯಕ್ಕೆ ದೂರು ಸಲ್ಲಿಸಿದ್ದರು.
ಸಚಿವಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ವರ್ಮಾ ಅವರು ಕೇಜ್ರಿವಾಲ್ ಅವರ ಹೇಳಿಕೆಯನ್ನು `ಪ್ರಜಾಪ್ರಭುತ್ವದ ಮೇಲಿನ ದಾಳಿ~ ಎಂದು ಖಂಡಿಸಿ ಅವರಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.
ಫೆಬ್ರುವರಿ 25 ರಂದು ಚುನಾವಣೆಯ ಪ್ರಚಾರದ ವೇಳೆ ಕೇಜ್ರಿವಾಲ್ ಅವರು `ಸಂಸತ್ತಿನಲ್ಲಿರುವ 163 ಸಂಸದರ ವಿರುದ್ಧ ಘೋರ ಅಪರಾಧಗಳ ಆರೋಪವಿದೆ. ಸಂಸತ್ತಿನಲ್ಲಿ ಅತ್ಯಾಚಾರಿಗಳು, ಹಂತಕರು ಹಾಗೂ ಲೂಟಿಕೋರರು ತುಂಬಿಕೊಂಡಿದ್ದಾರೆ. ಅವರಿಂದ ಸಂಸತ್ತಿನಲ್ಲಿ ಲೋಕಪಾಲ್ ಮಸೂದೆ ಮಂಡನೆಯಾಗುವುದನ್ನು ನೀವು ಹೇಗೆ ನಿರೀಕ್ಷಿಸುತ್ತೀರಿ? ಬಡತನ ಹಾಗೂ ಭ್ರಷ್ಟಾಚಾರದಿಂದ ನೀವು ಮುಕ್ತಿ ಹೊಂದುವುದನ್ನು ಹೇಗೆ ಎದುರು ನೋಡುತ್ತಿರಿ~ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.