ADVERTISEMENT

ಅರುಣಾ ಕರುಣಾಜನಕ ಸ್ಥಿತಿ:ಸಿಡಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2011, 19:30 IST
Last Updated 2 ಮಾರ್ಚ್ 2011, 19:30 IST


ನವದೆಹಲಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಕಳೆದ 37 ವರ್ಷಗಳಿಂದ ಯಾತನಾಮಯ ಸ್ಥಿತಿಯಲ್ಲಿರುವ ಅರುಣಾ ಶಾನಭಾಗ್ ಅವರ ನರಳುವಿಕೆ, ಚೀತ್ಕಾರ ಬುಧವಾರ ಸುಪ್ರೀಂಕೋರ್ಟ್‌ನಲ್ಲೂ ಪ್ರತಿಧ್ವನಿಸಿತು. ಅರುಣಾ ಅವರ ಕರುಣಾಜನಕ ಸ್ಥಿತಿ ಬಿಂಬಿಸುವ 10 ನಿಮಿಷಗಳ ಸಿಡಿಯನ್ನು ಕೋರ್ಟ್‌ನಲ್ಲಿ ಪ್ರದರ್ಶಿಸಲಾಯಿತು.

ತಾನು ನರ್ಸ್ ಆಗಿ ಕೆಲಸ ಮಾಡಿದ ಆಸ್ಪತ್ರೆಯ ಹಾಸಿಗೆಯಲ್ಲಿ ಅರುಣಾ ವೇದನೆ ಅನುಭವಿಸುತ್ತಿರುವ ದೃಶ್ಯ ಪ್ರದರ್ಶನಗೊಳ್ಳುತ್ತಿದ್ದಂತೆಯೇ ಅಲ್ಲಿದ್ದವರ ಮನ ಮರುಗಿತು. ಆಕೆ ತನ್ನ ತಿರುಚಿರುವ ಮಣಿಕಟ್ಟುಗಳನ್ನು ಆಡಿಸುತ್ತಾ ಚೀತ್ಕರಿಸುತ್ತಿದ್ದ ದೃಶ್ಯವನ್ನು ಸಿಡಿ ಒಳಗೊಂಡಿತ್ತು.

ಆಕೆ ವಿಸ್ಮೃತಿಯ ಸ್ಥಿತಿಯಲ್ಲಿಲ್ಲ ಮತ್ತು ಚಮಚದಲ್ಲಿ ನೀಡುವ ಅರೆದ ಆಹಾರವನ್ನು ಸೇವಿಸುತ್ತಿದ್ದಾರೆ ಎಂಬುದನ್ನು ಈ ಸಿಡಿ ತೋರಿಸಿತು. ಸದ್ಗುರು ವಾಮನ್‌ರಾವ್ ಪೈ ಅವರ ಭಕ್ತಿಗೀತೆಯೂ ಹಿನ್ನೆಲೆಯಲ್ಲಿ ಮೊಳಗಿತ್ತು.

‘ಪುರುಷನನ್ನು ನೋಡಿದ ಬಳಿಕ ಅರುಣಾ ಚೀರುತ್ತಾರೆ ಎಂಬುದು ನಿಜವಲ್ಲ. ಪುರುಷ- ಮಹಿಳೆ ವ್ಯತ್ಯಾಸ ಆಕೆಗೆ ತಿಳಿಯುತ್ತದೆ ಎಂದು ನನಗನಿಸುವುದಿಲ್ಲ’ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಸಂಜಯ್ ನರಹರಿ ಹೇಳಿದರು.

ಸದ್ಗುರು ಅವರ ಹಾಡುಗಳನ್ನು ಆಕೆ ಇಷ್ಟಪಡುತ್ತಾರೆ. ಈ ಹಾಡು ಕೇಳುತ್ತಿದ್ದಾಗ ಟೇಪ್‌ರೆಕಾರ್ಡರ್ ನಿಲ್ಲಿಸಿದರೆ ಮುಖ ಕಿವುಚುತ್ತಾರೆ ಎಂದೂ ಅವರು ತಿಳಿಸಿದರು.

ಅರುಣಾ ಮಲೇರಿಯಾದಿಂದ ತೊಂದರೆಗೊಳಗಾದ ಬಳಿಕ ಕಳೆದ ಸೆಪ್ಟೆಂಬರ್‌ನಿಂದ ಕೊಳವೆ ಮೂಲಕ ಆಹಾರ ನೀಡಲಾಗುತ್ತಿದೆ ಎಂದ ಅವರು ಅವರಿಗೆ ನೀಡುತ್ತಿರುವ ಆಹಾರ ನಿಲ್ಲಿಸಲು ಅಥವಾ ದಯಾ ಮರಣದ ಮೂಲಕ ಆಕೆಯನ್ನು ಚಿರನಿದ್ರೆಗೆ ತೆರಳುವಂತೆ ಮಾಡುವುದನ್ನು ವಿರೋಧಿಸಿದರು.  ‘ಅರುಣಾ ಸಹಜವಾಗಿಯೇ ಸಾವನ್ನಪ್ಪಬೇಕು’ ಎಂದೂ ಅವರು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.