ಮದುರೆ (ಪಿಟಿಐ): ಡಿಎಂಕೆ ನಾಯಕ ಕರುಣಾನಿಧಿಯವರ ಹಿರಿಯ ಪುತ್ರ ಮತ್ತು ಕೇಂದ್ರದ ಮಾಜಿ ಸಚಿವ ಎಂ.ಕೆ. ಅಳಗಿರಿ ಅವರು ಹೊಸ ಪಕ್ಷ ಸ್ಥಾಪಿಸುವ ಪ್ರಕಟಣೆ ಭಾನುವಾರ ನಗರದ ಕೆಲವೆಡೆ ಗೋಡೆ ಪೋಸ್ಟರ್‌ಗಳಲ್ಲಿ ಕಾಣಿಸಿದ್ದು, ಇದು ಕೆಲವು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
ಪಕ್ಷದಿಂದ ಅಮಾನತುಗೊಂಡ ನಂತರವೂ ತಾವು ಡಿಎಂಕೆ ಬಿಡುವುದಿಲ್ಲ ಎಂದು ಅಳಗಿರಿ ಹೇಳುತ್ತಿದ್ದರೂ, ಅವರ ಬೆಂಬಲಿಗರು ಎನ್ನಲಾದ ಕೆಲವರು ಈ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.
ಅಳಗಿರಿ ಮನೆಯ ಬಳಿ ಹಾಕಿರುವ ಪೋಸ್ಟರ್‌ನಲ್ಲಿ ‘ಕಲೈನ್‌ಗರ್ ಡಿಎಂಕೆ’ ಸಿದ್ಧವಾಗಿದ್ದು, ಈ ಅತೃಪ್ತ ನಾಯಕನೇ ಅದರ ಪ್ರಧಾನ ಕಾರ್ಯದರ್ಶಿ ಎಂದು ಘೋಷಿಸಲಾಗಿದೆ.
ತಮ್ಮ ಬೆಂಬಲಿಗರ ಸಭೆಗೂ ಮುನ್ನಾ ದಿನ ಕಾಣಿಸಿಕೊಂಡಿರುವ ಈ ಪೋಸ್ಟರ್‌ಗಳಲ್ಲಿ ‘ನಮ್ಮ ಪಕ್ಷ, ಬಾವುಟ ತಯಾರಾಗಿದ್ದು, ಲೋಕಸಭಾ ಚುನಾವಣೆ ಎದುರಿಸಲು ನಮ್ಮ್ನನ್ನು ಬಿಡಿ’ ಎಂದೂ ಬರೆಯಲಾಗಿದೆ.ಈಗ ಕಾಣಿಸಿರುವ ಪೋಸ್ಟರ್‌ಗಳಲ್ಲಿ ಅಳಗಿರಿ, ಅವರ ಪುತ್ರ ದಯಾನಿಧಿ, ಮಾಜಿ ಉಪ ಮೇಯರ್ ಪಿ.ಎಂ. ಮನ್ನಾನ್ ಮತ್ತಿತರರ ಭಾವಚಿತ್ರಗಳಿವೆ.
ಡಿಎಂಕೆಯಿಂದ ಲೋಕಸಭಾ ಟಿಕೆಟ್ ನಿರಾಕರಿಸಲ್ಪಟ್ಟ ನಂತರ ಪಕ್ಷದ ದಕ್ಷಿಣ ವಲಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಸಂಸದ ಅಳಗಿರಿ, ಕಳೆದ ವಾರ ಪ್ರಧಾನಿ ಮನಮೋಹನ್ ಸಿಂಗ್, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ತಮಿಳು ಸೂಪರ್ಸ್ಟಾರ್ ರಜನಿ ಕಾಂತ್ ಅವರನ್ನು ಭೇಟಿಯಾಗಿದ್ದು, ಹಲವು ಶಂಕೆಗಳನ್ನು ಹುಟ್ಟಿಸಿದ್ದವು.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಂಕೆ ಹಿರಿಯ ನಾಯಕರೊಬ್ಬರು, ‘ಅಳಗಿರಿಯವರ ಕೆಲವು ಶಂಕಿತ ಬೆಂಬಲಿಗರು ಹೊಸ ಪಕ್ಷ ಸ್ಥಾಪಿಸಲು ಪ್ರಚೋದನೆ ನೀಡಿ ಈ ಪೋಸ್ಟರ್‌ಗಳನ್ನು ಹಾಕಿದ್ದಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.