ADVERTISEMENT

ಅಸ್ತಮಾ ರೋಗ ನಿವಾರಣೆಗೆ ‘ಮೀನು ಪ್ರಸಾದ’!

ಏಜೆನ್ಸೀಸ್
Published 9 ಜೂನ್ 2017, 7:02 IST
Last Updated 9 ಜೂನ್ 2017, 7:02 IST
‘ಮೀನು ಪ್ರಸಾದ’ ನೀಡುತ್ತಿರುವುದು
‘ಮೀನು ಪ್ರಸಾದ’ ನೀಡುತ್ತಿರುವುದು   

ಹೈದರಾಬಾದ್: ಜೀವಂತ ಮೀನು ನುಂಗುವುದರಿಂದ ಅಸ್ತಮಾ ರೋಗ ನಿವಾರಣೆ ಸಾಧ್ಯವೇ? ಹೌದೆನ್ನುತ್ತಾರೆ ಇಲ್ಲಿನ ನಾಂಪಳ್ಳಿ ಮೈದಾನದಲ್ಲಿ ಸೇರಿರುವ ಸಾವಿರಾರು ಜನ!

ನಾಟಿ ಔಷಧ ಮಿಶ್ರಿತ ಜೀವಂತ ಮುರ್ರೆಲ್ (ಇಂಗ್ಲಿಷ್ ಹೆಸರು) ಮೀನನ್ನು (ಹಾವು ಮೀನನ್ನು ಹೋಲುವ ಸಣ್ಣ ಜಾತಿಯ ಮೀನು) ನುಂಗುವುದರಿಂದ ಅಸ್ತಮಾ ನಿವಾರಣೆಯಾಗುತ್ತದೆ ಎಂಬುದು ಈ ಜನರ ನಂಬಿಕೆ. ಹೈದರಾಬಾದ್‌ನ ಬಥಿನಿ ಗೌಡ ಕುಟುಂಬಸ್ಥರು 1845ರಿಂದಲೂ ಇಂಥದ್ದೊಂದು ವಿಶಿಷ್ಟ ಚಿಕಿತ್ಸಾ ಕ್ರಮ ಅನುಸರಿಸುತ್ತಾ ಬಂದಿದ್ದು, ಇದೀಗ ಲಕ್ಷಾಂತರ ಜನ ಪ್ರತಿ ವರ್ಷ ಚಿಕಿತ್ಸೆಗಾಗಿ ಅವರ ಮೊರೆ ಹೋಗುತ್ತಾರೆ.

ಏನಿದು ಮೀನಿನ ಪ್ರಸಾದ?: ಮುರ್ರೆಲ್ ಮೀನನ್ನು ಮನೆಯಲ್ಲೇ ತಯಾರಿಸಿದ ನಾಟಿ ಔಷಧಿಯಲ್ಲಿ ಮುಳುಗಿಸಿ ಜೀವಂತವಾಗಿ ರೋಗಿಗೆ ನುಂಗಲು ನೀಡಲಾಗುತ್ತದೆ. ಇದನ್ನು ಮೀನು ಪ್ರಸಾದವೆಂದು ಕರೆಯುತ್ತಾರೆ. ರೋಗಿಯ ಗಂಟಲಿನ ಮೂಲಕ ಹೊಟ್ಟೆ ಸೇರುವ ಈ ಚಿಕ್ಕ ಮೀನು, ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ ಎಂಬುದು ಬಥಿನಿ ಕುಟುಂಬದವರ ಅಭಿಪ್ರಾಯ. 1845 ರಲ್ಲಿ ಹಿಂದೂ ಸಂತರೊಬ್ಬರು ಈ ಕುಟುಂಬದವರಿಗೆ ಗಿಡಮೂಲಿಕೆ ತಳಿಯೊಂದನ್ನು ನೀಡಿದ್ದರು. ಅದರ ಸಹಾಯದಿಂದ ಬೆಳೆಸಿದ ಗಿಡವನ್ನು ಬಳಸಿಕೊಂಡು ಔಷಧಿ ತಯಾರಿಸಲಾಗುತ್ತದೆ. 1845ರಿಂದಲೂ ಪ್ರತಿ ವರ್ಷ ಔಷಧಿ ನೀಡುತ್ತಾ ಬರಲಾಗಿದೆ. ಮೀನಿನ ಜತೆ ನೀಡುವ ಔಷಧಿಯನ್ನು ಜರ್ಮನಿ ಹಾಗೂ ಜಪಾನಿನ ಪ್ರಯೋಗಾಲಯಗಳಲ್ಲಿಯೂ ಪರೀಕ್ಷಿಸಲಾಗಿದ್ದು, ಇದರಿಂದ ಯಾವುದೇ ಅಪಾಯವಿಲ್ಲದಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ವರ್ಷಕ್ಕೊಮ್ಮ ಚಿಕಿತ್ಸೆ: ಪ್ರತಿ ವರ್ಷ ‘ಮೃಗಶಿರ ಕಾರ್ತಿ’ಯಂದು ಮೀನಿನ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಾರಿ ಬುಧವಾರ ಚಿಕಿತ್ಸೆ ನೀಡಲಾಗಿದೆ. ಸಾವಿರಾರು ಜನ ಮೀನಿನ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ನೀಡಲೆಂದೇ ‘ಬಥಿನಿ ಮೃಗಶಿರ ಕಾರ್ತಿ ಮೀನು ಪ್ರಸಾದ ಟ್ರಸ್ಟ್‌’ ಕಾರ್ಯಾಚರಿಸುತ್ತಿದೆ. ಈ ಬಾರಿ ಸುಮಾರು 200 ಕಿಲೋಗಿಂತಲೂ ಹೆಚ್ಚಿನ ಮೀನನ್ನು ಬಳಸಲಾಗಿದೆ ಎಂದು ಟ್ರಸ್ಟ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.