ಗುವಾಹಟಿ (ಐಎಎನ್‌ಎಸ್): ಸ್ವಲ್ಪ ಕಾಲದ ವಿರಾಮದ ನಂತರ ಅಸ್ಸಾಂನ ಬೋಡೊಲ್ಯಾಂಡ್ ಪ್ರಾಂತ್ಯದ ಜಿಲ್ಲೆಯಾದ (ಬಿಟಿಎಡಿ) ಕೊಕ್ರಝಾರ್‌ನಲ್ಲಿ ಮತ್ತೆ ಹೊತ್ತಿಕೊಂಡಿರುವ ಹಿಂಸಾಚಾರದ ದಳ್ಳುರಿಗೆ 11 ಜನರು ಬಲಿಯಾಗಿದ್ದು, ಕಾನೂನು ಸುವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ.
ಜಿಲ್ಲೆಯಾದ್ಯಂತ ಅನಿರ್ದಿಷ್ಟ ಕರ್ಫ್ಯೂ ಜಾರಿ ಹಾಗೂ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿರುವ ಎಲ್ಲ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಸೇನಾ ತುಕಡಿಗಳು ಪಥಸಂಚಲನ ನಡೆಸುತ್ತಿರುವ ಮಧ್ಯಯೇ ಜಿಲ್ಲೆಯ ಜಿಯಾಗುರಿ ಗ್ರಾಮದ ಮನೆಯೊಂದಕ್ಕೆ ಶುಕ್ರವಾರ ರಾತ್ರಿ ನುಗ್ಗಿದ ಶಂಕಿತ ಉಗ್ರರು ಓರ್ವ ಬಾಲಕ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ಬಾಲಕ ಗಾಯಗೊಂಡಿದ್ದಾನೆ.
`ಶಸ್ತ್ರಸಜ್ಜಿತ ಶಂಕಿತ ಉಗ್ರರ ಗುಂಪೊಂದು ಶುಕ್ರವಾರ ರಾತ್ರಿ 11 ಗಂಟೆಯ ಸುಮಾರಿಗೆ ಅಬ್ಬಾಸ್ ಅಲಿ ಎಂಬುವವರ ಮನೆಗೆ ನುಗ್ಗಿ ಗುಂಡಿಕ್ಕಿ ಸ್ಥಳದಲ್ಲಿಯೇ ನಾಲ್ವರನ್ನು ಹತ್ಯೆ ಮಾಡಿದ್ದು, ಘಟನೆಯಲ್ಲಿ ಓರ್ವ ಬಾಲಕನ ಕೈಗೆ ಗುಂಡು ತಗುಲಿ ಗಾಯವಾಗಿದೆ~ ಎಂದು ಪೊಲೀಸರು ತಿಳಿಸಿದರು.
ಮತ್ತೊಂದು ಪ್ರಕರಣದಲ್ಲಿ ಶುಕ್ರವಾರ ಸಂಜೆ ಬಮೂನ್‌ಗಾಂವ್‌ನ ಮನೆಯೊಂದರ ಮೇಲೆ ದಾಳಿ ಮಾಡಿರುವ ಉಗ್ರರು ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಮನೆಯಲ್ಲಿದ್ದ ಮಹಿಳೆಯೊಬ್ಬಳು ಗಾಯಗೊಂಡಿದ್ದಳು. ಆಸ್ಪತ್ರೆಗೆ ದಾಖಲಿಸಲಾಗಿದ್ದ ಅವಳು ಶನಿವಾರ ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದರು.
ಕಳೆದ 24 ಗಂಟೆಗಳಲ್ಲಿ ಐದು ಜನರ ಹತ್ಯೆಯಿಂದಾಗಿ ಕೊಕ್ರಝಾರ್‌ನಲ್ಲಿ ಕಳೆದ ಶನಿವಾರದಿಂದ ಹೊತ್ತಿಕೊಂಡಿರುವ ದ್ವೇಷದ ದಳ್ಳುರಿಗೆ ಇವರೆಗೆ ಒಟ್ಟು 11 ಜನರು ಬಲಿಯಾದಂತಾಗಿದೆ.
ಕೊಕ್ರ್‌ಝಾರ್, ಚಿರಾಂಗ್ ಸೇರಿದಂತೆ ಬೋಡೊ ಬುಡಕಟ್ಟು ಪ್ರಾಬಲ್ಯವಿರುವ ನಾಲ್ಕು ಜಿಲ್ಲೆಗಳಲ್ಲಿ ಕೆಲ ತಿಂಗಳ ಹಿಂದಷ್ಟೇ ಬೋಡೊಗಳು ಹಾಗೂ ಬಾಂಗ್ಲಾದೇಶದಿಂದ ವಲಸೆ ಬಂದ ಬಂಗಾಳಿ ಭಾಷಿಕ ಮುಸ್ಲಿಮರ ನಡುವೆ ಹೊತ್ತಿಕೊಂಡಿದ್ದ ಜನಾಂಗೀಯ ಕಲಹಕ್ಕೆ 100ಕ್ಕೂ ಅಧಿಕ ಜನರು ಬಲಿಯಾಗಿ, ಲಕ್ಷಾಂತರು ಜನರು ನಿರಾಶ್ರಿತರಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.