ADVERTISEMENT

ಅಸ್ಸಾಂ ಹಿಂಸಾಚಾರ, ಮುಂಬೈ ಗಲಭೆ; ಲೋಕಸಭೆಯಲ್ಲಿ ಗದ್ದಲ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ): ಅಸ್ಸಾಂ ಹಿಂಸಾಚಾರ ಹಾಗೂ ಅದಕ್ಕೆ ಸಂಬಂಧಿಸಿ ಮುಂಬೈನಲ್ಲಿ ನಡೆದ ಗಲಭೆ ಪ್ರಕರಣ ಸೋಮವಾರ ಲೋಕಸಭೆಯ ಕಲಾಪದಲ್ಲಿ ಪ್ರತಿಧ್ವನಿಸಿತು.

ಘಟನೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸುವಂತೆ ಶಿವಸೇನಾ ಹಾಗೂ ಬಿಜೆಪಿ ಸದಸ್ಯರು ಸರ್ಕಾರವನ್ನು ಒತ್ತಾಯಿಸಿ ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸಿದರು. ಸದಸ್ಯರ ಗದ್ದಲದಿಂದಾಗಿ ಸ್ಪೀಕರ್ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ಶೂನ್ಯವೇಳೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿತು. ಶಿವಸೇನಾ ಸಂಸದರು ಘಟನೆ ಕುರಿತು ಪಕ್ಷದ ಮುಖವಾಣಿ `ಸಾಮ್ನಾ~ದಲ್ಲಿ ಪ್ರಕಟವಾಗಿರುವ ವರದಿಯ ಪ್ರತಿಗಳನ್ನು ಸದನದಲ್ಲಿ ತೂರಿದರು. `ಇದು ಧರ್ಮಾಂಧ ಜಿಹಾದಿ~ಗಳ ಕೃತ್ಯ. ಘಟನೆಯನ್ನು ನಿಯಂತ್ರಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.


ಆಡಳಿತಪಕ್ಷ ಮತ್ತು ವಿರೋಧ ಪಕ್ಷದವರ ನಡುವೆ ವಾಕ್ಸಮರ ಏರ್ಪಟ್ಟಿತು. ಸಭಾಧ್ಯಕ್ಷೆ ಮೀರಾಕುಮಾರಿ ಅವರು ಸದನ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು. ಕಲಾಪ ಮತ್ತೆ ಆರಂಭವಾದ ನಂತರ ಶಿವಸೇನಾ ಸಂಸದರು ಗುಂಪು ಗುಂಪಾಗಿ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸರ್ಕಾರದ ವಜಾಕ್ಕೆ ಆಗ್ರಹಿಸಿದರು. ಬಿಜೆಪಿ ಸಂಸದರು ಪ್ರತಿಭಟನೆಗೆ ಜೊತೆಯಾದರು.

ಆಗ ಉಪ ಸಭಾಧ್ಯಕ್ಷ ಕರಿಯಾ ಮುಂಡಾ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು. ಪ್ರತಿಭಟನೆಗೂ ಮುನ್ನ, ಶಿವಸೇನಾ ನಾಯಕ ಅನಂತ್ ಗೀತೆ, `ಪ್ರತಿಭಟನಾ ಮೆರವಣಿಗೆ ನಡೆಸಲು ರಾಜ್ಯ ಸರ್ಕಾರ ರಜಾ ಅಕಾಡೆಮಿ ಮತ್ತು ಅವಾಮಿ ವಿಕಾಸ್ ಪಾರ್ಟಿ ಅನುಮತಿ ಕೊಟ್ಟಿದ್ದೇಕೆ~ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಶಿವಸೇನಾ ಸಂಸದರು, `ಪ್ರಧಾನಿಯವರು ಈ ಪ್ರಶ್ನೆಗೆ ಉತ್ತರಿಸಬೇಕೆಂದು~ ಪಟ್ಟು ಹಿಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT