ADVERTISEMENT

ಆಂಧ್ರ: ಕಿರಣ್‌ ಕುಮಾರ್‌ ಹೊಸ ಪಕ್ಷ

ತೆಲುಗು ಜನರ ಘನತೆ, ಗೌರವ ರಕ್ಷಣೆಯ ಧ್ಯೇಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:45 IST
Last Updated 6 ಮಾರ್ಚ್ 2014, 19:45 IST

ಹೈದರಾಬಾದ್‌(ಪಿಟಿಐ): ‘ತೆಲುಗು ಜನರ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯಲು’   ಹೊಸ ಪಕ್ಷ ರಚಿಸುವುದಾಗಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌.ಕಿರಣ್‌ ಕುಮಾರ್‌ ರೆಡ್ಡಿ ಗುರುವಾರ ಇಲ್ಲಿ ಘೋಷಿಸಿದರು.

ತೆಲಂಗಾಣ ರಾಜ್ಯ ರಚನೆಯ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಆರಂಭದಿಂದಲೂ ಸಂಘರ್ಷ ಮಾಡುತ್ತಲೇ ಬಂದ ರೆಡ್ಡಿ ಈಚೆಗೆ ಇದೇ ಕಾರಣಕ್ಕಾಗಿ ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.

‘ಪಕ್ಷದ ಹೆಸರು, ಅದರ ಸಿದ್ಧಾಂತಗಳು ಮತ್ತು ಇತರೆ ಮಾಹಿತಿ­­ಯನ್ನು ಮಾ.12ರಂದು ರಾಜಮಂಡ್ರಿ­ಯಲ್ಲಿ ನಡೆ­ಯ­ಲಿರುವ ಸಾರ್ವಜನಿಕ ಸಭೆಯಲ್ಲಿ ಪ್ರಕಟಿಸಲಾಗು­ವುದು’ ಎಂದು ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು. ಈ ವೇಳೆ ಕಾಂಗ್ರೆಸ್‌­ನಿಂದ ಅಮಾನತುಗೊಂಡ ಮೂವರು ಸಂಸದರೂ ಇದ್ದರು.

ಹೊಸ ಪಕ್ಷವು ತೆಲುಗರ ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡಲಿದೆ. ಪಕ್ಷ  ಸೀಮಾಂಧ್ರ ಮತ್ತು ತೆಲಂಗಾಣ­ದವರಿಗೆ ಸೀಮಿತ­ವಾಗಿರದೆ ಬೇರೆಡೆ ವಾಸಿಸು­ತ್ತಿರುವ ತೆಲುಗು ಜನರ ಅಭಿವೃದ್ಧಿಗೂ ಶ್ರಮಿಸಲಿದೆ ಎಂದು ರೆಡ್ಡಿ ಹೇಳಿದರು.

ತೆಲುಗು ದೇಶಂ ಪಕ್ಷ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಕೂಡ ಆಂಧ್ರಪ್ರದೇಶವನ್ನು ವಿಭಜಿಸುವಲ್ಲಿ ಪಾತ್ರ ವಹಿಸಿವೆ. ಆದ್ದ­ರಿಂದಲೇ ಹೊಸ ಪಕ್ಷ ಆರಂಭಿಸಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.