ADVERTISEMENT

ಆಘಾತದಿಂದ ಹೊರಬಂದಿಲ್ಲ: ಸಂತ್ರಸ್ತೆಯ ಸ್ನೇಹಿತನ ಮನದಾಳ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST
ಆಘಾತದಿಂದ ಹೊರಬಂದಿಲ್ಲ:  ಸಂತ್ರಸ್ತೆಯ ಸ್ನೇಹಿತನ ಮನದಾಳ
ಆಘಾತದಿಂದ ಹೊರಬಂದಿಲ್ಲ: ಸಂತ್ರಸ್ತೆಯ ಸ್ನೇಹಿತನ ಮನದಾಳ   

ನವದೆಹಲಿ (ಐಎಎನ್‌ಎಸ್‌):  ‘ಆ ಕರಾಳ ಘಟನೆಯಿಂದ ಆದ ಆಘಾತ­ದಿಂದ ನಾನು ಇನ್ನೂ ಹೊರ ಬಂದಿಲ್ಲ. ನನಗೆ ಅಪರಾಧಿ ಪ್ರಜ್ಞೆ ಕಾಡುತ್ತದೆ. ಆ ದಿನ ನಾನ್ಯಾಕೆ ಆಕೆಯನ್ನು ಕರೆದು­ಕೊಂಡು ಮಾಲ್‌ಗೆ ಹೋಗಿದ್ದೆ? ಆ ಬಸ್‌ ಹತ್ತಿದ್ದಾದರೂ ಯಾಕೆ? ನನ್ನಿಂ­ದಲೇ ಹೀಗಾಯಿತೇ? ಇಂಥ ನೂರಾರು ಪ್ರಶ್ನೆ­ಗಳು ಕಾಡುತ್ತಿವೆ’– ವಿದ್ಯಾರ್ಥಿ­ನಿಯ ಸ್ನೇಹಿತ  ಅವನೀಂದ್ರ ಪಾಂಡೆ ಹೇಳುವ ಮಾತಿದು.

‘ನಾಲ್ವರು ಅಪರಾಧಿಗಳಿಗೆ ಮರಣ ದಂಡನೆ ವಿಧಿಸಿರುವುದು ತುಸು ನೆಮ್ಮದಿ ತಂದಿದೆ. ಆದರೆ ಬಾಲಾಪ­ರಾಧಿಗೆ ಕೂಡ ಇದೇ ಶಿಕ್ಷೆ  ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಡಿಸೆಂಬರ್‌ 16ರ ರಾತ್ರಿ ನಾನು ಮತ್ತು ಸ್ನೇಹಿತೆ ‘‘ಲೈಫ್‌ ಆಫ್‌ ಪೈ’’ ಚಿತ್ರ ನೋಡಿದ್ದೆವು. ಆದರೆ ಇಂಥ­ದ್ದೊಂದು ಘೋರ ಕೃತ್ಯವನ್ನು ನಿರೀಕ್ಷಿಸಿ­ರಲೂ ಇಲ್ಲ. ಈಗಲೂ ನನಗೆ  ಆ ಘಟನೆ ದುಃಸ್ವಪ್ನವಾಗಿ ಕಾಡುತ್ತಿದೆ.’

‘ಸಿನಿಮಾ ನೋಡಿದ ಮೇಲೆ  ಆಕೆಯ ಮನೆಗೆ (ದ್ವಾರಕಾ) ಹೋಗ­ಬೇಕಿತ್ತು. ಆಟೊ ಸಿಗಲಿಲ್ಲ. ಮುನಿರಿಕಾ ಬಸ್‌ ನಿಲ್ದಾಣದವ­ರೆ­ಗಾದರೂ ಬಿಡು­ವಂತೆ ಆಟೊ ಚಾಲಕ­ನೊಬ್ಬನನ್ನು ಕೇಳಿ­ಕೊಂಡೆವು. 15 ನಿಮಿಷದ ನಂತರ ಅಲ್ಲಿಗೆ ತಲುಪಿ­ದೆವು. ಅಲ್ಲೇ ಒಂದು ಖಾಸಗಿ ಬಸ್‌ ಕಣ್ಣಿಗೆ ಬಿತ್ತು. ಹುಡುಗ­ನೊಬ್ಬ ನಮ್ಮನ್ನು ಕರೆದ. ಬಸ್‌ ಹತ್ತಿದಾಗಲೇ ಗೊತ್ತಾಗಿದ್ದು ಏನೋ ಎಡವಟ್ಟಾಗಿದೆ ಅಂತ. ಅದರಲ್ಲಿದ್ದ ಐವರು ಗಂಡಸರು ಪ್ರಯಾಣಿಕರಂತೆ ವರ್ತಿ­ಸಿದರು. ಹುಡುಗನೊಬ್ಬ ಬಂದು ಟಿಕೆಟ್‌ ಕೊಟ್ಟ. ಕೊನೆಗೆ ಅವರೆಲ್ಲ ಬಸ್‌ ಬಾಗಿಲು ಹಾಕಿದರು, ದೀಪಗಳನ್ನು ಆರಿಸಿದರು. ಮೂವರು ಗಂಡಸರು ನಮ್ಮ ಬಳಿ ಬಂದರು. ಒಬ್ಬ ನನ್ನ ಮುಖಕ್ಕೆ ಗುದ್ದಿದ.  ನಮ್ಮಿಬ್ಬರ ಮಧ್ಯೆ ಜಗಳ ನಡೆ­ಯಿತು. ಸ್ನೇಹಿತೆಯ ಮುಖದಲ್ಲಿ ಭಯ ಮನೆ ಮಾಡಿತ್ತು. ಆ ದುರುಳರು ನಮ್ಮ ಫೋನ್‌ ಕಸಿದು­ಕೊಂಡರು. ಕಬ್ಬಿಣದ ಸಲಾಕೆ­ಯಿಂದ ನಮ್ಮಿಬ್ಬರಿಗೂ ಹೊಡೆದರು. ನಾನು ಸಹಾಯಕ್ಕಾಗಿ ಕೂಗಿದೆ. ಕಿಟಕಿ ಗಾಜು ಒಡೆಯಲು ಯತ್ನಿಸಿದೆ.’

‘ಅವರೆಲ್ಲ ಸ್ನೇಹಿತೆಯ ಮೇಲೆ ಮುಗಿಬಿದ್ದರು. ಕೊನೆಗೆ ನಮ್ಮಿಬ್ಬರನ್ನೂ ಬಸ್‌ನಿಂದ ಹೊರಕ್ಕೆ ದಬ್ಬಿದರು. ಅರೆ­ಪ್ರ­ಜ್ಞಾ­ವಸ್ಥೆಯಲ್ಲಿದ್ದ ನಾನು ಏಳಲು ಪ್ರಯತ್ನಿಸಿದೆ. ಕೆಲವು ಕಾರುಗಳು ನಮ್ಮನ್ನು ನೋಡಿ ನಿಂತವು. ಆದರೆ ಅದರಲ್ಲಿದ್ದವರು ಸಹಾಯ ಮಾಡದೇ ಮುಂದೆ ಹೋದರು. ನಂತರ  ಹೆದ್ದಾರಿ ಗಸ್ತು ವಾಹನ ನಮ್ಮನ್ನು ನೋಡಿ ನಿಂತಿತು. ಅದರ ಸಿಬ್ಬಂದಿ ನಮ್ಮನ್ನು ಆಸ್ಪತ್ರೆಗೆ ಸೇರಿಸಿದರು’– ಹೀಗೆ   ಕರಾಳ ನೆನಪು ಬಿಚ್ಚಿಟ್ಟರು ಪಾಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.