ADVERTISEMENT

ಆತಂಕದಲ್ಲಿ ಖಂಡು ಭವಿಷ್ಯ?

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ನವದೆಹಲಿ (ಪಿಟಿಐ): ಭೂತಾನ್ ಬಳಿಯ ಪಶ್ಚಿಮ ಕಮೆಂಗ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ‘ವಿಮಾನದ ಲೋಹಗಳನ್ನು ಹೋಲುವಂತಹ ಹೊಳೆಯುವ ಕೆಲ ವಸ್ತುಗಳು’ ಸೋಮವಾರ ಪತ್ತೆಯಾಗಿರುವುದಾಗಿ ಭಾರತೀಯ ವಾಯುಪಡೆ ಹೇಳಿದೆ.

ಇದರಿಂದಾಗಿ ಮೂರು ದಿನಗಳಿಂದ ಕಾಣೆಯಾಗಿರುವ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಮತ್ತು ಇತರೆ ನಾಲ್ವರು ಪ್ರಯಾಣಿಸುತ್ತಿದ್ದ ಪವನಹಂಸ ಹೆಲಿಕಾಪ್ಟರ್ ಭವಿಷ್ಯ ಅಂದುಕೊಂಡಷ್ಟು ಸುಖಮಯವಾಗಿಲ್ಲ ಎಂಬ ಆತಂಕಗಳನ್ನು ಇನ್ನಷ್ಟು ಹೆಚ್ಚಿಸಿದೆ.

ಸೋಮವಾರ ಎರಡು ಸುಖೋಯ್ ವಿಮಾನಗಳು ತೆಗೆದ ಚಿತ್ರದಲ್ಲಿ ಭೂತಾನ್‌ನ ಪ್ರದೇಶವೊಂದರಲ್ಲಿ ಈ ರೀತಿಯ ಅವಶೇಷಗಳು  ಅರಣ್ಯ ಪ್ರದೇಶದಲ್ಲಿ ಬಿದ್ದಿರುವ ಬಗ್ಗೆ ಸುಳಿವು ದೊರೆತಿದೆ ಎಂದು ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ಕೆ.ಕೆ. ನೊಹ್ವರ್ ಸೋಮವಾರ ಹೇಳಿದ್ದಾರೆ.

ಬಾಂಗಾಗಾಂಗ ಎಂಬಲ್ಲಿಯ ಗಡಿಯ ಭಾಗದಲ್ಲಿನ ರಸ್ತೆ ಸಾರಿಗೆ ಉದ್ಯೋಗಿಗಳು ಕೂಡಾ ಶನಿವಾರ ಬೆಳಿಗ್ಗೆ ಭಾರಿ ಸ್ಫೋಟದ ಶಬ್ದ ಕೇಳಿಬಂದಿದ್ದಾಗಿ ತಿಳಿಸಿದ್ದಾರೆ. ಇವರು ಹೇಳುತ್ತಿರುವ ಸ್ಫೋಟದ ಸದ್ದು ಕೇಳಿ ಬಂದ ವೇಳೆ ಹಾಗೂ ಶನಿವಾರ ಖಂಡು ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕಾಣೆಯಾದ ಸಮಯ ತಾಳೆಯಾಗುತ್ತಿರುವುದು ಈಗ ಎಲ್ಲರ ದುಗುಡ ಹೆಚ್ಚಿಸಿದೆ.

ಇದೇ ಅನಿಸಿಕೆಯನ್ನು ಬೊಮ್ದಿಲಾ ಎಂಬಲ್ಲಿನ ಚಾಲಕನೊಬ್ಬ ಕೂಡಾ ಪುಷ್ಟೀಕರಿಸಿದ್ದಾನೆ. ಇಸ್ರೊ ನೆರವಿನಿಂದ ಈ ಅವಶೇಷಗಳ ಸುಳಿವು ಕಂಡು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ನಾಗಾಜಿಜಿ ಎಂಬ ದುರ್ಗಮ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಶತ ಪ್ರಯತ್ನ
ಪ್ರತಿಕೂಲ ಹವಾಮಾನವನ್ನೂ ಲೆಕ್ಕಿಸದೆ ಭಾರತ- ಭೂತಾನ್ ಗಡಿಯಲ್ಲಿರುವ ಮೂರು ಪ್ರಮುಖ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳು ನಾಪತ್ತೆಯಾದ ಹೆಲಿಕಾಪ್ಟರ್‌ಗಾಗಿ ಸೋಮವಾರ ಶೋಧ ಕಾರ್ಯಾಚರಣೆ ನಡೆಸಿದವು.

‘ಈಗಲ್ ನೆಸ್ಟ್’ ಪಕ್ಷಿಧಾಮ, ತವಾಂಗ್ ಗಡಿಗೆ ಹೊಂದಿಕೊಂಡಂತೆ ಇರುವ ಪಶ್ಚಿಮ ಕಮೆಂಗ್ ಜಿಲ್ಲೆಯ ನಾಗಾಜನ್ ಪ್ರದೇಶ ಮತ್ತು ಭೂತಾನಿನ ತಾಶಿ ಯಂಗ್ಶ್ ಜಿಲ್ಲೆಯ ಮೊಬಿ ಗ್ರಾಮದಲ್ಲಿ ತೀವ್ರ ಹುಡುಕಾಟ ನಡೆಸಲಾಗಿದೆ’ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.