ADVERTISEMENT

ಆದರ್ಶ ಹಗರಣ: ಐಎಎಸ್ ಅಧಿಕಾರಿ ಸೇರಿ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ಮುಂಬೈ: ಆದರ್ಶ ವಸತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಯು (ಸಿಬಿಐ) ಬುಧವಾರ ಇಬ್ಬರು ನಿವೃತ್ತ ಉನ್ನತ ದರ್ಜೆಯ ಮೇಜರ್ ಜನರಲ್‌ಗಳು ಹಾಗೂ ಐಎಎಸ್ ಅಧಿಕಾರಿ ಸೇರಿದಂತೆ ನಾಲ್ವರನ್ನು ಬಂಧಿಸಿದೆ.

ಈ ಹಗರಣದ ತನಿಖೆಗೆ ಸಂಬಂಧಿಸಿದಂತೆ ಗುರುವಾರ ಬಾಂಬೆ ಹೈಕೋರ್ಟ್‌ಗೆ ಸಿಬಿಐ ಸ್ಥಿತಿಗತಿ ವರದಿ ಸಲ್ಲಿಸಬೇಕಿದ್ದು, ಅದರ ಮುನ್ನಾದಿನ ಈ ಬಂಧನ ನಡೆದಿದೆ.

ನಿವೃತ್ತ ಮೇಜರ್ ಜನರಲ್‌ಗಳಾದ ಎ.ಆರ್.ಕುಮಾರ್, ಟಿ.ಕೆ.ಕೌಲ್, ಮಹಾರಾಷ್ಟ್ರ ಸರ್ಕಾರದ ಹಣಕಾಸು ಇಲಾಖೆ ಕಾರ್ಯದರ್ಶಿ ಡಾ.ಪ್ರದೀಪ್ ವ್ಯಾಸ್ (ವೆಚ್ಚ ವಿಭಾಗ) ಮತ್ತು ಆದರ್ಶ ಸಂಸ್ಥೆಯ ಪ್ರಮುಖ ಪ್ರವರ್ತಕರೂ ಆದ ಮಾಜಿ ಶಾಸಕ ಕನ್ಹಿಯಾಲಾಲ್ ಗಿದ್ವಾನಿ ಬಂಧಿತರಾದವರು.

ಸಿಬಿಐ ವಕೀಲರಿಗೆ ಲಂಚ ನೀಡಿದ್ದ ಆರೋಪಕ್ಕೆ ಸಿಲುಕಿ ಇಲ್ಲಿನ ಆರ್ಥರ್ ಜೈಲು ಸೇರಿದ್ದ ಗಿದ್ವಾನಿಗೆ ಜಾಮೀನು ಸಿಕ್ಕಿದ್ದು, ಬುಧವಾರ  ಕಾರಾಗೃಹದ ಗೇಟ್ ತೆಗೆದು ಹೊರಬರುತ್ತಿದ್ದಂತೆ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದರು.ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆಯಾದವರ ಸಂಖ್ಯೆ ಏಳಕ್ಕೆ ಏರಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.