ಚೆನ್ನೈ (ಪಿಟಿಐ): ಲೋಕಸಭೆ ಚುನಾವಣೆಯ ನಂತರ ಕೇಂದ್ರದಲ್ಲಿ ಹೊಸದಾಗಿ ರಚನೆಯಾಗುವ ಸರ್ಕಾರದಲ್ಲಿ ಭಾಗಿಯಾದರೆ ಆದಾಯ ತೆರಿಗೆ ಮಿತಿಯನ್ನು ಐದು ಲಕ್ಷ ರೂಪಾಯಿಗಳಿಗೆ ಏರಿಸುವ ಭರವಸೆಯನ್ನು ಎಐಎಡಿಎಂಕೆ ನೀಡಿದೆ.
ಎಐಎಡಿಎಂಕೆ ಚುನಾವಣೆ ಪ್ರಣಾಳಿಕೆಯನ್ನು ಮುಖ್ಯ ಮಂತ್ರಿ ಜಯಲಲಿತಾ ಮಂಗಳವಾರ ಬಿಡುಗಡೆ ಮಾಡಿದರು. ಜಯಲಲಿತಾ ಅವರು ಪ್ರಧಾನಿ ಹುದ್ದೆಗೇರಬೇಕು ಎಂದು ಬಯಸಿರುವ ಪಕ್ಷವು ರಾಷ್ಟ್ರದ ಮತದಾರರನ್ನು ಗಮನದಲ್ಲಿ ಇಟ್ಟುಕೊಂಡು ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿಗದಿ ಅಧಿಕಾರವನ್ನು ತೈಲ ಕಂಪೆನಿಯಿಂದ ವಾಪಸ್ ಪಡೆಯುವ ಭರವಸೆಯೂ ಪ್ರಣಾಳಿಕೆಯಲ್ಲಿ ಸೇರಿದೆ. ತಮಿಳುನಾಡಿನಲ್ಲಿ ಈಗಾಗಲೇ ಜಾರಿಯಲ್ಲಿ ಇರುವ ಜನಪ್ರಿಯ ಯೋಜನೆಗಳಾದ ಮಿಕ್ಸಿ, ಗ್ರೈಂಡರ್, ಫ್ಯಾನ್, ಹಾಲು ಕರೆಯುವ ಹಸು ಮತ್ತು ಮೇಕೆಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮಗಳನ್ನು ದೇಶದಾದ್ಯಂತ ವಿಸ್ತರಿಸುವ ಭರವಸೆ ನೀಡಲಾಗಿದೆ.
ನನೆಗುದಿಯಲ್ಲಿ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆ ಮತ್ತು ವಿದೇಶಿ ಬ್ಯಾಂಕುಗಳಲ್ಲಿ ಇರುವ ಕಪ್ಪು ಹಣ ವಾಪಸ್ ತರುವ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ವಿಶೇಷವಾಗಿ ಪ್ರಸ್ತಾಪಿಸಲಾಗಿದೆ.
ತಮಿಳುನಾಡಿನ ಅಭಿವೃದ್ಧಿಯ ಜತೆಗೆ ಇಡೀ ದೇಶದ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರಣಾಳಿಕೆಯನ್ನು ಸಿದ್ಧಪಡಿಸಿರುವುದಾಗಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತ ಮುಖ್ಯಮಂತ್ರಿ ಜಯಲಲಿತಾ ತಿಳಿಸಿದರು. ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳು ಮತ್ತು ಪುದುಚೇರಿಯ ಏಕೈಕ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದ ಮಾರನೇ ದಿನವೇ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಲಾಗಿದೆ.
ರಾಜ್ಯದ ಅಭಿವೃದ್ಧಿಯು ಕೇಂದ್ರ ಸರ್ಕಾರದ ಆರ್ಥಿಕ, ವಿದೇಶಾಂಗ ನೀತಿಗಳ ಮೇಲೆ ಅವಲಂಬಿಸಿರುವುದರಿಂದ ಮುಂದಿನ ಸರ್ಕಾರದಲ್ಲಿ ಎಐಎಡಿಎಂಕೆ ಮುಖ್ಯ ಪಾಲುದಾರ ಪಕ್ಷವಾಗುವುದು ಅಗತ್ಯ ಎಂದು ಜಯಾ ತಿಳಿಸಿದರು.
ಶ್ರೀಲಂಕಾದಲ್ಲಿ ತಮಿಳರ ಹಕ್ಕಿನ ರಕ್ಷಣೆಯೂ ಪ್ರಣಾಳಿಕೆಯಲ್ಲಿ ಪ್ರಸ್ತಾಪವಾಗಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ರಾಜ್ಯ ರಚನೆಗೆ ಜನಮತಗಣನೆ ನಡೆಸುವಂತೆ ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.