ADVERTISEMENT

ಆಪ್‌ ಮುಖಂಡ ವಿಶ್ವಾಸ್‌ ವಿರುದ್ಧ ಬೇಡಿ ದೂರು

ಕೀಳಾಗಿ ಟೀಕಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 10:49 IST
Last Updated 31 ಜನವರಿ 2015, 10:49 IST

ನವದೆಹಲಿ (ಪಿಟಿಐ): ಆಮ್‌ ಆದ್ಮಿ ಪಕ್ಷದ (ಆಪ್‌) ಮುಖಂಡ ಕುಮಾರ್‌ ವಿಶ್ವಾಸ್‌ ಅವರು ತಮ್ಮ ವಿರುದ್ಧ ಕೀಳಾಗಿ ಟೀಕೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿಯ ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‌ ಬೇಡಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೂ ದೂರು ನೀಡಿದೆ.

‘ಇತ್ತೀಚೆಗೆ ನಡೆದ ಚುನಾವಣಾ ರ್ಯಾಲಿಯಲ್ಲಿ ವಿಶ್ವಾಸ್‌ ಅವರು ತಮ್ಮ ವಿರುದ್ಧ ಕೀಳು ಮಟ್ಟದ ಟೀಕೆ ಮಾಡಿದ್ದಾರೆ. ಇಂಥ ಕೀಳು ಮನೋಭಾವದ ಮುಖಂಡರಿಂದ ಮಹಿಳೆಯರು ಯಾವ ರೀತಿಯ ರಕ್ಷಣೆಯನ್ನು ನಿರೀಕ್ಷಿಸಲು ಸಾಧ್ಯ’ ಎಂದು ಬೇಡಿ ಹೇಳಿದ್ದಾರೆ.

ಕಿರಣ್‌ ಬೇಡಿ ಅವರ ಆರೋಪವನ್ನು ತಳ್ಳಿಹಾಕಿರುವ ವಿಶ್ವಾಸ್‌, ‘ಅವರು ಮಾಡಿರುವ ಆರೋಪ ಸಾಬೀತಾದರೆ ನಾನು ರಾಜಕೀಯದಿಂದ ಹೊರ ನಡೆಯುತ್ತೇನೆ. ಆರೋಪ ಸುಳ್ಳು ಎಂಬುದು ಬಯಲಾದರೆ ಬೇಡಿ ರಾಜಕೀಯದಿಂದ ಹೊರ ಹೋಗಬೇಕು’ ಎಂದಿದ್ದಾರೆ.

ADVERTISEMENT

‘ಬೇಡಿ ಜನರನ್ನು ತಪ್ಪು ದಾರಿಗೆಳೆಯಲು ಯತ್ನಿಸುತ್ತಿದ್ದಾರೆ. ಅವರ ಆರೋಪದಿಂದ ನನಗೆ ಅಚ್ಚರಿಯಾಗಿದೆ. ನಾನು ಕೀಳಾಗಿ ಟೀಕೆ ಮಾಡಿದ್ದೇನೆಂದು ಹೇಳಲಾಗುವ ವಿಡಿಯೊ ಯಾವ ವಾಹಿನಿಯಲ್ಲೂ ಪ್ರಸಾರವಾಗಿಲ್ಲ. ರ್ಯಾಲಿಯ ವೇಳೆ ಸಾಕಷ್ಟು ಕ್ಯಾಮೆರಾಗಳಿದ್ದವು. ಅಲ್ಲಿ ಚುನಾವಣಾ ಆಯೋಗದ ಕ್ಯಾಮೆರಾ ಕೂಡಾ ಇತ್ತು’ ಎಂದು ವಿಶ್ವಾಸ್‌ ಹೇಳಿದ್ದಾರೆ.

‘ದೆಹಲಿಯ ಅಭಿವೃದ್ಧಿ ಬಗ್ಗೆ ಮಾತನಾಡಲು ಬಿಜೆಪಿ ಬಳಿ ಕಾರ್ಯಸೂಚಿಗಳೇ ಇಲ್ಲ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಮುಖಂಡರು ಇಲ್ಲಸಲ್ಲದ ವದಂತಿಗಳನ್ನು ಹರಡುತ್ತಿದ್ದಾರೆ. ಬಿಜೆಪಿಯ ಆರೋಪದಲ್ಲಿ ಹುರುಳಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಬೇಡಿ ಅವರು ಅಮಿತ್‌ ಷಾ ಅವರ ಆದರ್ಶಗಳನ್ನು ಪಾಲಿಸುತ್ತಿದ್ದಾರೆ. ಅವರು ಬಿಜೆಪಿಯ ರಾಹುಲ್‌ ಗಾಂಧಿಯಾಗಲು ಯತ್ನಿಸುತ್ತಿದ್ದಾರೆ. ಬಿಜೆಪಿಯವರು ಬೇಡಿ ಅವರನ್ನು ಮುಂದೆ ಏನು ಮಾಡುತ್ತಾರೆ ಎಂಬುದು ಅವರಿಗಿನ್ನೂ ಅರಿವಾಗಿಲ್ಲ’ ಎಂದು ವಿಶ್ವಾಸ್‌ ಹೇಳಿದ್ದಾರೆ.

ವಿಶ್ವಾಸ್‌ ಹೇಳಿದ್ದೇನು?
‘ಅರವಿಂದ್‌ ಕೇಜ್ರಿವಾಲ್‌ ಅವರು ಮಫ್ಲರ್‌ ಸುತ್ತಿಕೊಳ್ಳುವುದು ಬಿಜೆಪಿಗೆ ಸಮಸ್ಯೆಯಾಗಿದೆ. ಅವರೇನು ಅದನ್ನು ನಿಮ್ಮಿಂದ ಕಸಿದುಕೊಂಡಿದ್ದಾರೆಯೇ? ಅವರಿಗೆ ಕೆಮ್ಮು ಹೆಚ್ಚೆಂದು ಕೆಲವರು ಹೇಳಿದ್ದಾರೆ. ಅದರಿಂದ ನಿಮಗೇನು ತೊಂದರೆ? ನೀವೇನು ಅವರೊಂದಿಗೆ ಮಲಗಬೇಕೆ?’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.