ADVERTISEMENT

ಆಮ್ ಆದ್ಮಿ ನಾಯಕನಿಗೆ ಅಣ್ಣಾ ಹಜಾರೆ 'ಅರ್ಧ ಚಂದ್ರ'

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 11:29 IST
Last Updated 13 ಡಿಸೆಂಬರ್ 2013, 11:29 IST

ರಾಳೆಗಣ ಸಿದ್ಧಿ (ಮಹಾರಾಷ್ಟ್ರ): ಮರುಹೊಂದಾಣಿಕೆಯ ಸುಳಿವುಗಳ ಬೆನ್ನಲ್ಲೇ ಅಣ್ಣಾ ಹಜಾರೆ ತಂಡ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಡುವಣ ಬಿರುಕು ಶುಕ್ರವಾರ ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಜೊತೆಗೆ ಬಹಿರಂಗ ಘರ್ಷಣೆಗೆ ಇಳಿದ ಆಮ್ ಆದ್ಮಿ ಪಕ್ಷದ ನಾಯಕನಿಗೆ ತಮ್ಮ ನಿರಶನ ತಾಣದಿಂದ ಹೊರಟು ಹೋಗುವಂತೆ ಹಜಾರೆ ಸೂಚಿಸಿದ ಘಟನೆ ಘಟಿಸಿದೆ.

ಜನ ಲೋಕಪಾಲ ಮಸೂದೆ ಅಂಗೀಕರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟ ನಿರಶನ ನಡೆಸುತ್ತಿರುವ ಅಣ್ಣಾ ಹಜಾರೆ ಅವರು ಜನರಲ್ ಸಿಂಗ್ ಅವರ ಭಾಷಣಕ್ಕೆ ಅಡ್ಡಿ ಪಡಿಸಿದ ಆಮ್ ಆದ್ಮಿ ಪಕ್ಷದ ನಾಯಕ ಗೋಪಾಲ್ ರೈ ಅವರನ್ನು ಸ್ಥಳಬಿಟ್ಟು ತೆರಳುವಂತೆ ಬಹಿರಂಗವಾಗಿ ಸೂಚಿಸಿದರು.

ಹಜಾರೆ ಅವರ ಬಹಿರಂಗ ಸೂಚನೆಗೆ ಪ್ರತಿಕ್ರಿಯಿಸಿದ ಎಎಪಿ ತತ್ ಕ್ಷಣವೇ ರೈ ಅವರನ್ನು ನಿವೇಶನ ಸ್ಥಳದಿಂದ ಹಿಂದಕ್ಕೆ ಬರುವಂತೆ ರೈ ಅವರಿಗೆ ಹೇಳಿತು. ರೈ ಅವರು ರಾಳೆಗಣ ಸಿದ್ಧಿಯಿಂದ ಹೊರಟು ಹೋದರು.

'ಪಿತೃ ಸಮಾನರಾದ ಹಜಾರೆ ಅವರ ಆದೇಶವನ್ನು ಪಾಲಿಸುತ್ತಿದ್ದೇನೆ. ದೆಹಲಿಯಲ್ಲಿ ನನ್ನ ಮನೆಯಲ್ಲಿಯೇ ನಿರಶನ ಮುಂದುವರೆಸುವೆ' ಎಂದು ರೈ ಹೇಳಿದರು.

ಮಾಜಿ ಸೇನಾ ಮುಖ್ಯಸ್ಥ ಸಿಂಗ್ ಅವರು ಹಠಾತ್ತನೆ ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ಯನ್ನು ಟೀಕಿಸುವುದರೊಂದಿಗೆ ಇದೆಲ್ಲ ಆರಂಭಗೊಂಡಿತು. 'ನಮ್ಮ ವೈಯಕ್ತಿಕ ಲಾಭಗಳಿಗಾಗಿ ನಾವು ವಿಭಜನೆಗೊಳ್ಳಬಾರದು ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ವಿವಿಧ ಗುಂಪುಗಳನ್ನು ರಚಿಸಿಕೊಳ್ಳಬಾರದು' ಎಂದು ಮಾಜಿ ಸೇನಾ ಮುಖ್ಯಸ್ಥರು ಹೇಳಿದರು.

ಅಣ್ಣಾ ಹಜಾರೆ ಮತ್ತು ಕೇಜ್ರಿವಾಲ್ ಸೇರಿದಂತೆ ಎಎಪಿ ನಾಯಕರು ವರ್ಷದ ಹಿಂದೆ ಎಎಪಿ ರಚಿಸುವುದಕ್ಕೆ ಮುನ್ನ ಭ್ರಷ್ಟಾಚಾರ ವಿರೋಧಿ ಚಳವಳಿ ಹಾಗೂ ಜನಲೋಕಪಾಲ ಮಸೂದೆ ಜಾರಿಗಾಗಿ ವರ್ಷಕ್ಕೂ ಹೆಚ್ಚುಕಾಲ ನಡೆದ ಹೋರಾಟದಲ್ಲಿ ಜೊತೆಯಾಗಿದ್ದರು ಎಂದು ಅವರು ನುಡಿದರು.

ನಿರಶನ ಅಂತ್ಯದವರೆಗೂ ಹಜಾರೆ ಜೊತೆಗಿರುವಂತೆ ಎಎಪಿಯಿಂದ ನಿಯೋಜಿತರಾಗಿದ್ದ ರೈ ಈ ಹಂತದಲ್ಲಿ ಸಿಂಗ್ ಅವರ ಭಾಷಣಕ್ಕೆ ಅಡ್ಡಿ ಪಡಿಸಿ ಪ್ರಶ್ನೆ ಕೇಳಲಾರಂಭಿಸಿ ಜನಲೋಕಪಾಲ ಮಸೂದೆ ಬಗ್ಗೆ ಚರ್ಚಿಸುವಂತೆ ಒತ್ತಾಯಿಸಿದರು. ಇತರ ವಿಚಾರಗಳನ್ನು ಏಕೆ ಎತ್ತುತ್ತಿದ್ದೀರಿ ಎಂದು ಅವರು ಸಿಂಗ್ ಅವರನ್ನು ಪ್ರಶ್ನಿಸಿದರು.

ನಾಲ್ಕನೇ ದಿನ ನಿರಶನ ಮುಂದುವರೆಸಿರುವ ಹಜಾರೆ ಅವರು ಜನರಲ್ ಸಿಂಗ್ ಅವರ ಭಾಷಣಕ್ಕೆ ಅಡ್ಡಿ ಪಡಿಸದಂತೆ ರೈ ಅವರಿಗೆ ಸೂಚಿಸಿದರು.

ಆದರೂ ರೈ ಮತ್ತು ಸಿಂಗ್ ಅವರು ವಾಗ್ವಾದ ಮುಂದುವರಿಯಿತು. ತತ್ ಕ್ಷಣವೇ ಮೈಕ್ ಕೈಗೆತ್ತಿಕೊಂಡ ಹಜಾರೆ 'ನಿರಶನದಲ್ಲಿ ಪಾಲ್ಗೊಳ್ಳಬೇಡಿ ಎಂದು ಸೂಚಿಸಿದ್ದರೂ ನೀವು ಪಾಲ್ಗೊಂಡಿದ್ದೀರಿ. ಈಗ ಜನರಲ್ ಸಿಂಗ್ ಭಾಷಣಕ್ಕೆ ಅಡ್ಡಿ ಪಡಿಸಬೇಡಿ ಎಂದು ಜನ ನಿಮಗೆ ಹೇಳುತ್ತಿದ್ದಾರೆ. ಗದ್ದಲ ಉಂಟು ಮಾಡುವುದಾಗಿದ್ದರೆ ನೀವು ಗ್ರಾಮ ಬಿಟ್ಟು ತೆರಳಬೇಕಾಗುತ್ತದೆ. ಜನ ಮಾತನಾಡುವಾಗ ಅಡ್ಡಿ ಪಡಿಸುವುದು ತರವಲ್ಲ' ಎಂದು ಹಜಾರೆ ಹೇಳಿದರು.

ಒಂದು ಹಂತದಲ್ಲಿ ಸಿಂಗ್ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಏಜೆಂಟ್ ಎಂದೂ ರೈ ಟೀಕಿಸಿದಾಗ, ಸ್ಥಳ ಬಿಟ್ಟು ತೆರಳುವಂತೆ ಹಜಾರೆ ರೈ ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.