ADVERTISEMENT

ಆಯೋಗದ ಅಧಿಕಾರ ಪ್ರಶ್ನಾತೀತ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:35 IST
Last Updated 13 ಜನವರಿ 2012, 19:35 IST

ನವದೆಹಲಿ: `ಚುನಾವಣಾ ಆಯೋಗದ ಅಧಿಕಾರ ಪ್ರಶ್ನಾತೀತ. ಅದರ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಪ್ರಶ್ನಿಸಲಾಗದು. ಆಯೋಗಕ್ಕೆ ಇಂಥ ಆತಂಕಗಳಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು~ ಎಂದು ಪ್ರಧಾನಿ ಮನಮೋಹನ್‌ಸಿಂಗ್ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ ಅವರಿಗೆ ತಿಳಿಸಿದ್ದಾರೆ.

`ಚುನಾವಣಾ ಆಯೋಗದ ಬಗ್ಗೆ ಬಹಿರಂಗ ಹೇಳಿಕೆ ಕೊಡುವ ಮೂಲಕ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಸಂವಿಧಾನಾತ್ಮಕ ಸಂಸ್ಥೆಯ ಸ್ವಾಯತ್ತ ಅಧಿಕಾರವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ~ ಎಂದು ದೂರಿ ಮುಖ್ಯ ಚುನಾವಣಾ ಕಮಿಷನರ್ ಇತ್ತೀಚೆಗೆ ಬರೆದಿದ್ದ ಪತ್ರಕ್ಕೆ ಪ್ರಧಾನಿ ಸಿಂಗ್ ಶುಕ್ರವಾರ ಉತ್ತರ ಬರೆದಿದ್ದಾರೆ.

ಸಲ್ಮಾನ್ ವಿರುದ್ಧ ದೂರಿ ಪ್ರಧಾನಿಗೆ ಪತ್ರ ಬರೆಯಲಾಗಿದೆ ಎಂದು ಇದಕ್ಕೂ ಮೊದಲು ಖುರೇಶಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು. ಆದರೆ, ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. ಕಳೆದ ತಿಂಗಳು ಕಾನೂನು ಸಚಿವರು ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ `ಪ್ರತಿಯೊಂದು ಸಂಸ್ಥೆಗಳು ಒಂದಲ್ಲ ಒಂದು ರೀತಿ ಸರ್ಕಾರದ ನಿಯಂತ್ರಣದಲ್ಲಿ ಇರುತ್ತವೆ;  ಉದಾಹರಣೆಗೆ ಚುನಾವಣಾ ಕಮಿಷನರ್ ವಿದೇಶ ಪ್ರವಾಸದ ಕಡತಕ್ಕೆ ಕಾನೂನು ಸಚಿವಾಲಯ ಸಹಿ ಹಾಕುತ್ತದೆ~ ಎಂದಿದ್ದರು. ಈ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮುಖ್ಯ ಚುನಾವಣಾ ಕಮಿಷನರ್ ಪ್ರಧಾನಿ ಅವರಿಗೆ ಪತ್ರ ಬರೆದಿದ್ದರು.

ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಅಂಗೀಕರಿಸಲಾದ ಲೋಕಪಾಲ ಮಸೂದೆಯು ಕೇಂದ್ರ ತನಿಖಾ ದಳ (ಸಿಬಿಐ) ಮೇಲೆ ನಿಯಂತ್ರಣ ಹೊಂದಲು ಅವಕಾಶ ನೀಡಲಿದೆ ಎಂಬ ಅಣ್ಣಾ ಹಜಾರೆ ವಿರೋಧದ ಹಿನ್ನೆಲೆಯಲ್ಲಿ  ಸಚಿವರು ಈ ಮಾತು ಹೇಳಿದ್ದರು.

ಕಾನೂನು ಸಚಿವರು ತಮ್ಮ ಹೇಳಿಕೆಗಳಿಂದ ತೊಂದರೆಗೆ ಸಿಕ್ಕಿಕೊಳ್ಳುತ್ತಿರುವುದು ಇದು ಎರಡನೇ ಸಲ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತ ಮುಸ್ಲಿಮರಿಗೆ  ಶೇ.9 ಮೀಸಲಾತಿ ಕಲ್ಪಿಸುವ ಭರವಸೆ ನೀಡಿ ಚುನಾವಣಾ ಆಯೋಗದಿಂದ ನೋಟಿಸ್ ಪಡೆದಿದ್ದಾರೆ. ಆಯೋಗದ ನೋಟಿಸ್‌ಗೆ ಉತ್ತರ ನೀಡಿರುವ ಸಲ್ಮಾನ್ ಖುರ್ಷಿದ್, `ಹೊಸದಾಗಿ ಈ ಭರವಸೆ ನೀಡಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಡುಗಡೆ ಮಾಡಿದ ಪಕ್ಷದ ಪ್ರಣಾಳಿಕೆಯಲ್ಲಿ ಇರುವ ಅಂಶವನ್ನೇ ಪ್ರಸ್ತಾವ ಮಾಡಿದ್ದೇನೆ~ ಎಂದು ಗುರುವಾರ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.