ADVERTISEMENT

ಆಯೋಗ, ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್

ಐಎಎಸ್ ಅಧಿಕಾರಿಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 19:59 IST
Last Updated 16 ಏಪ್ರಿಲ್ 2013, 19:59 IST

ಬೆಂಗಳೂರು: ಚುನಾವಣಾ ಆಯೋಗ ನೀಡಿದ್ದ ನಿರ್ದೇಶನದ ಅನುಸಾರ ಐ.ಎ.ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಹೊರಡಿಸಿದ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಆಯೋಗಕ್ಕೆ ಹೆಚ್ಚಿನ ಅಧಿಕಾರ ಇದೆ ಎಂದು ಮಂಗಳವಾರ ಹೇಳಿದೆ.

ಆಯೋಗದ ನಿರ್ದೇಶನದ ಅನುಸಾರ ಈಗ ನಡೆದಿರುವ ವರ್ಗಾವಣೆ, ಅಧಿಕಾರಿಗಳನ್ನು ಅನ್ಯ ಕಾರ್ಯಕ್ಕೆ ನಿಯೋಜನೆ ಮಾಡಿದಂತೆ. ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ಈ ಅಧಿಕಾರಿಗಳ ನಿಯೋಜನೆ ಅವಧಿ ಕೂಡ ಮುಗಿಯುತ್ತದೆ ಎಂದು ನ್ಯಾಯಮೂರ್ತಿ ಎನ್. ಕುಮಾರ್ ಮತ್ತು ನ್ಯಾಯಮೂರ್ತಿ ಬಿ. ಮನೋಹರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶದಲ್ಲಿ ಹೇಳಿದೆ.

ಒಟ್ಟು 12 ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗ ಸರ್ಕಾರಕ್ಕೆ ಮಾರ್ಚ್ 26ರಂದು ನಿರ್ದೇಶನ ನೀಡಿತ್ತು. ಇದರ ಅನುಸಾರ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಮಾ. 27ರಂದು ಆದೇಶಿಸಿತು. ಈ ಎಲ್ಲ ಅಧಿಕಾರಿಗಳು ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಹೊಂದಿದವರು.

ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳಾದ ಡಾ. ರಾಮೇಗೌಡ, ಬಿ.ಎನ್. ಕೃಷ್ಣಯ್ಯ, ಎನ್. ಪ್ರಕಾಶ್, ಜಿ.ಸಿ. ಪ್ರಕಾಶ್, ಎಫ್.ಆರ್. ಜಮಾದಾರ್, ಎಸ್.ಎನ್. ನಾಗರಾಜು, ವಿ. ಶ್ರೀರಾಮರೆಡ್ಡಿ ಮತ್ತು ಎನ್. ಜಯರಾಮ ಅವರು ಸರ್ಕಾರದ ಆದೇಶವನ್ನು ಕೇಂದ್ರೀಯ ಆಡಳಿತ ನ್ಯಾಯಮಂಡಳಿಯಲ್ಲಿ (ಸಿ.ಎ.ಟಿ) ಪ್ರಶ್ನಿಸಿದರು. ಅರ್ಜಿಯ ವಿಚಾರಣೆ ನಡೆಸಿದ ಸಿಎಟಿ, ಸರ್ಕಾರ ಹೊರಡಿಸಿದ್ದ ವರ್ಗಾವಣೆ ಆದೇಶಕ್ಕೆ ಇದೇ 12ರಂದು ಮಧ್ಯಂತರ ತಡೆಯಾಜ್ಞೆ ನೀಡಿ, ಎಂಟು ಅಧಿಕಾರಿಗಳು ಮಾರ್ಚ್ 27ಕ್ಕೂ ಮೊದಲು ಕರ್ತವ್ಯದಲ್ಲಿದ್ದ ಸ್ಥಳಕ್ಕೆ ಪುನಃ ವರ್ಗಾವಣೆ ಮಾಡಬೇಕು ಎಂದು ಸೂಚಿಸಿತ್ತು.

ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿದ ಸಿಎಟಿ, ಪ್ರತಿ ಹೇಳಿಕೆ ಸಲ್ಲಿಸುವಂತೆ ಸರ್ಕಾರ ಮತ್ತು ಆಯೋಗಕ್ಕೆ ನಿರ್ದೇಶನ ನೀಡಿತು. ಮಧ್ಯಂತರ ತಡೆಯಾಜ್ಞೆಯನ್ನು ಆಯೋಗ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಆಯೋಗದ ಅರ್ಜಿಯನ್ನು ವಿಭಾಗೀಯ ಪೀಠ ಮಾನ್ಯ ಮಾಡಿದೆ. ಸಿಎಟಿ ನೀಡಿದ್ದ ಮಧ್ಯಂತರ ಆದೇಶವನ್ನು ರದ್ದು ಮಾಡಿದೆ.

ಸಂವಿಧಾನದ 324ನೇ ವಿಧಿಯ ಅನ್ವಯ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.