ಹೈದರಾಬಾದ್ (ಐಎಎನ್‌ಎಸ್): ಕನ್ನಡದ ‘ರಂಗಿತರಂಗ’ ಮತ್ತು ತೆಲುಗಿನ ‘ಶ್ರೀಮಂತುಡು’ ಚಲನಚಿತ್ರಗಳು ಇಲ್ಲಿ ನಡೆದ ‘ಐಐಎಫ್‌ಎ ಉತ್ಸವ’ದಲ್ಲಿ ತಲಾ ಆರು ಪ್ರಶಸ್ತಿಗಳನ್ನು ಪಡೆದಿವೆ. ಎರಡು ದಿನಗಳ ಕಾಲ ನಡೆದ ಈ ಚಲನಚಿತ್ರ ಉತ್ಸವದಲ್ಲಿ ತೆಲುಗು ಮತ್ತು ಕನ್ನಡ ಚಲನಚಿತ್ರ ಉದ್ಯಮದಲ್ಲಿನ ಪ್ರತಿಭಾವಂತರನ್ನು ಗೌರವಿಸಲಾಯಿತು.
ಕನ್ನಡ ವಿಭಾಗದಲ್ಲಿ ‘ರಂಗಿತರಂಗ’ಕ್ಕೆ ಅತ್ಯುತ್ತಮ ಚಲನಚಿತ್ರ ಮತ್ತು ಅನೂಪ್ ಭಂಡಾರಿ ಅವರಿಗೆ ಅತ್ಯುತ್ತಮ ನಿರ್ದೇ
ಶನ, ಸಂಗೀತ ನಿರ್ದೇಶನ ಮತ್ತು ಗೀತೆಗಳ ರಚನೆಗಾಗಿ ಪ್ರಶಸ್ತಿ ದೊರೆಯಿತು. ಸಾಯಿ ಕುಮಾರ್ ಅವರಿಗೆ ಅತ್ಯುತ್ತಮ ಪೋಷಕ ಪಾತ್ರ ಹಾಗೂ ಅರವಿಂದ ರಾವ್ ಅವರಿಗೆ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಲಭಿಸಿತು.
ಯಶ್ ನಟಿಸಿರುವ ‘ಮಿ. ಆ್ಯಂಡ್ ಮಿಸೆಸ್ ರಾಮಾಚಾರಿ’ ಚಲನಚಿತ್ರ ನಾಲ್ಕು ಪ್ರಶಸ್ತಿಗಳನ್ನು ಪಡೆಯಿತು. ಯಶ್ ಅವರಿಗೆ ಅತ್ಯುತ್ತಮ ನಟ ಹಾಗೂ ರಾಧಿಕಾ ಪಂಡಿತ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು. ಹಾಸ್ಯ ಪಾತ್ರಕ್ಕಾಗಿ ಸಾಧು ಕೋಕಿಲಾ ಮತ್ತು ಹಿನ್ನೆಲೆ ಗಾಯನಕ್ಕಾಗಿ ಶ್ರೇಯಾ ಘೋಷಾಲ್ ಅವರಿಗೆ ಪ್ರಶಸ್ತಿಗಳು ಲಭಿಸಿದವು.
‘ಕೃಷ್ಣ ಲೀಲಾ’ ಚಲನಚಿತ್ರದಲ್ಲಿ ನಟಿಸಿರುವ ಲಕ್ಷ್ಮೀ ರಾಜ್ ಅವರಿಗೆ ಅತ್ಯುತ್ತಮ ಪೋಷಕಿ ಪಾತ್ರ ಪ್ರಶಸ್ತಿ ನೀಡಲಾಯಿತು. ‘ವಜ್ರಕಾಯ’ದಲ್ಲಿನ ಹಾಡುಗಳಿಗಾಗಿ ಧನುಷ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಸಂಗೀತಗಾರ ಪ್ರಶಸ್ತಿ ನೀಡಲಾಯಿತು.
ತೆಲುಗು ವಿಭಾಗದಲ್ಲಿ ಕೋರಟಾಲಾ ಶಿವಾ ನಿರ್ದೇಶನದ ‘ಶ್ರೀಮಂತುಡು’ ಚಲನಚಿತ್ರದಲ್ಲಿ ನಟಿಸಿರುವ ಮಹೇಶ
ಬಾಬು ಮತ್ತು ಶ್ರುತಿ ಹಾಸನ್ ಅವರಿಗೆ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ನೀಡಲಾಯಿತು. ಇದೇ ಚಲನಚಿತ್ರದಲ್ಲಿನ ಅತ್ಯುತ್ತಮ ಪೋಷಕ ನಟನೆಗಾಗಿ ಜಗ ಪತಿ ಬಾಬು, ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ದೇವಿ ಶ್ರೀ ಪ್ರಸಾದ್, ಅತ್ಯುತ್ತಮ ಗೀತ ರಚನೆಗಾಗಿ ರಾಮಜೋಗಯ್ಯ ಶಾಸ್ತ್ರಿ ಮತ್ತು ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ಸಾಗರ ಅವರಿಗೆ ಪ್ರಶಸ್ತಿ ನೀಡಲಾಯಿತು.
ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಅತ್ಯುತ್ತಮ ಚಲನಚಿತ್ರ ಸೇರಿದಂತೆ ಐದು ಪ್ರಶಸ್ತಿಗಳನ್ನು ಪಡೆದುಕೊಂಡಿತು. ಅತ್ಯುತ್ತಮ ನಿರ್ದೇಶನಕ್ಕಾಗಿ ರಾಜಮೌಳಿ ಅವರಿಗೆ ಪ್ರಶಸ್ತಿ ನೀಡಲಾಯಿತು. ರಮ್ಯ ಕೃಷ್ಣ ಅವರಿಗೆ ಅತ್ಯುತ್ತಮ ಪೋಷಕ ನಟಿ, ರಾಣಾ ದಗ್ಗುಬಾಟಿ ಅವರಿಗೆ ಅತ್ಯುತ್ತಮ ಖಳನಟ ಹಾಗೂ ಸತ್ಯಾ ಯಾಮಿನಿ ಅವರಿಗೆ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕೆ ಪ್ರಶಸ್ತಿ ಲಭಿಸಿತು. ಕಳೆದ ವರ್ಷ ಸೂಪರ್‌ಹಿಟ್ ಆಗಿದ್ದ ‘ಭಲೆ ಭಲೆ ಮಗಾದಿವಾಯ್’ ಚಲನಚಿತ್ರದಲ್ಲಿನ ನಟನೆಗಾಗಿ ವೆನ್ನೆಲಾ ಕಿಶೋರ್ ಅವರಿಗೆ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.