ADVERTISEMENT

ಆರೋಗ್ಯ ವಿಮೆ: ಸಾವಿರಕ್ಕೂ ಹೆಚ್ಚು ಪ್ಯಾಕೇಜ್‌

ಕೇಂದ್ರದ ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ 10.74 ಕೋಟಿ ಫಲಾನುಭವಿಗಳು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 20:31 IST
Last Updated 22 ಮಾರ್ಚ್ 2018, 20:31 IST
ಆರೋಗ್ಯ ವಿಮೆ: ಸಾವಿರಕ್ಕೂ ಹೆಚ್ಚು ಪ್ಯಾಕೇಜ್‌
ಆರೋಗ್ಯ ವಿಮೆ: ಸಾವಿರಕ್ಕೂ ಹೆಚ್ಚು ಪ್ಯಾಕೇಜ್‌   

ನವದೆಹಲಿ: ಬಡವರು ಹಾಗು ಹಿಂದುಳಿದ ಸಮುದಾಯದ ಜನರಿಗಾಗಿ ವೈದ್ಯಕೀಯ ವಿಮೆ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್– ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ (ಎನ್‌ಎಚ್‌ಪಿಎಂ) ಅಡಿಯಲ್ಲಿ 1,347 ಚಿಕಿತ್ಸಾ ಸೇವೆಗಳು ದೊರೆಯಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಯೋಜನೆ ವ್ಯಾಪ್ತಿಗೆ ಬರುವ ಕುಟುಂಬಗಳಿಗೆ ತಲಾ ₹5 ಲಕ್ಷದವರೆಗೆ ಸರ್ಕಾರದಿಂದ ವಿಮೆ ದೊರಕಲಿದೆ. ಅಂದಾಜು 10.74 ಕೋಟಿ ಮಂದಿ ಫಲಾನುಭವಿಗಳಾಗಲಿದ್ದಾರೆ. ಪ್ರತಿ ಕುಟುಂಬಕ್ಕೆ ನಿಗದಿಪಡಿಸಬಹುದಾದ ವಿಮೆ ಕಂತು ಮೊತ್ತದ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ವಿಮಾ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡ ನಂತರವಷ್ಟೇ ಕಂತು ಮೊತ್ತ ನಿಗದಿ ಆಗಲಿದೆ.

ADVERTISEMENT

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ದೊರಕಲಿದೆ. ಯೋಜನೆಯಲ್ಲಿ ಒದಗಿಸುವ ಸಮಗ್ರ ಚಿಕಿತ್ಸೆಗೆ ಏಕರೂಪದ ದರಪಟ್ಟಿಯನ್ನು ಸಚಿವಾಲಯ ಅಂತಿಮಗೊಳಿಸುತ್ತಿದ್ದು, ರಾಜ್ಯ ಸರ್ಕಾರಗಳು ಹಾಗೂ ವಿಮಾ ಸಂಸ್ಥೆಗಳ ಜತೆ ಇದನ್ನು ಹಂಚಿಕೊಳ್ಳಲಾಗುತ್ತದೆ.

ಸಮಗ್ರ ಚಿಕಿತ್ಸಾ ವೆಚ್ಚದಲ್ಲಿ ಆಸ್ಪತ್ರೆಗೆ ದಾಖಲಾತಿ, ಪ್ರಮುಖ ತಪಾಸಣೆಗಳು, ಶಸ್ತ್ರಚಿಕಿತ್ಸೆ (ಅಗತ್ಯವಿದ್ದಲ್ಲಿ) ಹಾಗೂ ಔಷಧ ವೆಚ್ಚವನ್ನು ಸೇರಿಸಲಾಗುತ್ತದೆ. ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಮಾಡಿದಲ್ಲಿ, ಮಸೂರಗಳ ವೆಚ್ಚ, ಹೃದಯದ ಶಸ್ತ್ರಚಿಕಿತ್ಸೆಗಳಿಗೆ ಬಳಸುವ ಸ್ಟೆಂಟ್‌ಗಳ ವೆಚ್ಚವನ್ನು ಸೇರಿಸಲಾಗುತ್ತದೆ.

ಸದ್ಯಕ್ಕೆ ಶ್ವಾಸಕೋಶ, ಮೂತ್ರಪಿಂಡ, ಕಣ್ಣಿನ ಕಸಿ ಶಸ್ತ್ರಚಿಕಿತ್ಸೆಯನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ. ಆಯುಷ್ಮಾನ್ ಭಾರತ್ ಎಂಬ ಹೆಸರಿನ ಯೋಜನೆಯನ್ನು ‘ಮೋದಿ ಕೇರ್’ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ.

ಚಿಕಿತ್ಸಾ ದರಪಟ್ಟಿಯನ್ನು ಸಚಿವಾಲಯವು ಅಂತಿಮಗೊಳಿಸಿದ ನಂತರ, ನಿರ್ದಿಷ್ಟ ಮಿತಿಯೊಳಗೆ ರಾಜ್ಯ ಸರ್ಕಾರಗಳು ಇದನ್ನು ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನೀಡಲಾಗುವುದು.

**

2011ರ ಗಣತಿ ಆಧರಿಸಿ ಪಟ್ಟಿ

2011ರ ಸಾಮಾಜಿಕ ಆರ್ಥಿಕ ಜಾತಿ ಗಣತಿ (ಎಸ್ಇಸಿಸಿ) ಆಧಾರದ ಮೇಲೆ ಯೋಜನೆಯ ಫಲಾನುಭವಿಗಳನ್ನು ಏಪ್ರಿಲ್ ನಂತರ ಗುರುತಿಸಲಾಗುತ್ತದೆ. ಎಸ್‌ಇಸಿಸಿ ನೀಡಿರುವ ಕ್ಯುಆರ್ ಕೋಡ್ ಉಳ್ಳ ಅಧಿಕೃತ ಪತ್ರವನ್ನು ಫಲಾನುಭವಿ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ ಗೆ ತಿಳಿಸಿವೆ.

ಆಸ್ಪತ್ರೆಗಳಲ್ಲಿ ಸೌಲಭ್ಯ ಪಡೆಯಲು ಮೂಲಪತ್ರ ಅಥವಾ ನಕಲನ್ನು ಸಲ್ಲಿಸಬೇಕಾಗುತ್ತದೆ. ತಂತ್ರಜ್ಞಾನದ ಸಹಾಯದಿಂದ ವ್ಯಕ್ತಿಯ ಗುರುತು ಇರಿಸಿಕೊಂಡು ಚಿಕಿತ್ಸೆಯ ಕುರಿತು ನಿಗಾ ಇರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.