ADVERTISEMENT

‘ಆರ್ಥಿಕತೆ ಹೃದಯಕ್ಕೆ ಮೋದಿ ಸರ್ಕಾರದಿಂದ ಎರಡು ಗುಂಡು’

ನೋಟು ರದ್ಧತಿ ಗುಂಡು, ಢಮಾರ್. ಜಿಎಸ್‌ಟಿ ಗುಂಡು ಢಮಾರ್. ಆರ್ಥಿಕತೆ ಕುಸಿದು ಬಿತ್ತು

ಪಿಟಿಐ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
‘ಆರ್ಥಿಕತೆ ಹೃದಯಕ್ಕೆ ಮೋದಿ ಸರ್ಕಾರದಿಂದ ಎರಡು ಗುಂಡು’
‘ಆರ್ಥಿಕತೆ ಹೃದಯಕ್ಕೆ ಮೋದಿ ಸರ್ಕಾರದಿಂದ ಎರಡು ಗುಂಡು’   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ದೇಶದ ಆರ್ಥಿಕತೆಯ ಹೃದಯಕ್ಕೆ ಒಂದರ ಹಿಂದೆ ಒಂದರಂತೆ ನೋಟು ರದ್ದತಿ ಮತ್ತು ಜಿಎಸ್‌ಟಿ ಎಂಬ ಗುಂಡುಗಳನ್ನು ಹೊಡೆದು ಅದನ್ನು ಕೊಂದಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ದೆಹಲಿಯಲ್ಲಿ ಗುರುವಾರ ನಡೆದ ಪಿಎಚ್‌ಡಿ ವಾಣಿಜ್ಯ ಮತ್ತು ಉದ್ಯಮಗಳ ಸಂಘಟನೆಯ 112ನೇ ಸಮ್ಮೇಳನದಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ರಾಹುಲ್ ಮಾತನಾಡಿದರು.

‘ವ್ಯಕ್ತಿಗಳನ್ನು ಕೊಲ್ಲಲು ಅವರ ಎದೆಗೆ ಒಂದರ ಹಿಂದೆ ಒಂದರಂತೆ ಎರಡು ಗುಂಡುಗಳನ್ನು ಹೊಡೆದು ಕೊಲ್ಲುವುದನ್ನು ಡಬಲ್ ಟ್ಯಾಪ್ ಎನ್ನುತ್ತಾರೆ. ಮೋದಿ ಮತ್ತವರ ತಂಡ ಇದೇ ರೀತಿ ಕೆಲಸ ಮಾಡುತ್ತಿದೆ. ಮೊದಲು ನೋಟು ರದ್ದತಿಯ ಗುಂಡು ಹೊಡೆದರು, ಢಮಾರ್. ಆನಂತರ ಜಿಎಸ್‌ಟಿಯ ಗುಂಡು ಹೊಡೆದರು, ಢಮಾರ್. ನಮ್ಮ ಆರ್ಥಿಕತೆ ಕುಸಿದು ಬಿತ್ತು. ದೇಶದ ಉದ್ದಿಮೆ ವಲಯ ಕುಸಿತದ ಹಾದಿ ಹಿಡಿದಿದೆ. ಆದರೆ ಹಣಕಾಸು ಸಚಿವ ಅರುಣ್ ಜೇಟ್ಲಿ ದಿನ ಬಿಟ್ಟು ದಿನ ಟಿವಿ ವಾಹಿನಿಗಳ ಎದುರು ಹೋಗುತ್ತಾರೆ. ‘ಎಲ್ಲವೂ ಉತ್ತಮವಾಗಿದೆ’ ಎಂದು ಹೇಳುತ್ತಾರೆ’ ಎಂದು ರಾಹುಲ್ ಲೇವಡಿ ಮಾಡಿದರು.

ADVERTISEMENT

‘ನೋಟು ರದ್ದತಿ ಮತ್ತು ಜಿಎಸ್‌ಟಿಯಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಅನುಭವಿಸುತ್ತಿರುವ ತೊಂದರೆಯನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ. ಪರಸ್ಪರರ ಮಾತನ್ನು ಕೇಳಿಸಿಕೊಂಡಾಗ ಮಾತ್ರ ನಂಬಿಕೆ ಇರುತ್ತದೆ. ಈ ಸರ್ಕಾರದಲ್ಲಿ ಜನರ ನೋವನ್ನು ಕೇಳುವವರು ಯಾರೂ ಇಲ್ಲ. ಪ್ರಧಾನಿ ಮತ್ತವರ ಸರ್ಕಾರ ದೇಶದ ಪ್ರತಿಯೊಬ್ಬರನ್ನೂ ಕಳ್ಳರಂತೆ ನಡೆಸಿಕೊಂಡಿತು. ಜಿಎಸ್‌ಟಿ ತೆರಿಗೆ ಭಯೋತ್ಪಾದನೆಯ ಸುನಾಮಿಯನ್ನು ಉಂಟು ಮಾಡಿದೆ. ಜನರಿಗೆ ಈ ಸರ್ಕಾರದ ಮೇಲೆ ನಂಬಿಕೆ ಸತ್ತೇ ಹೋಗಿದೆ’ ಎಂದು ಅವರು ಹರಿಹಾಯ್ದರು.

‘ಈ ಹಿಂದೆ ಮೌಲ್ಯಗಳು ಮತ್ತು ನಾಯಕತ್ವದ ಗುಣಗಳ ಕಾರಣ ಇಡೀ ಜಗತ್ತು ಭಾರತದ ನೋಡುತ್ತಿತ್ತು. ಈಗ ‘ತಾಜ್ ಮಹಲನ್ನು ಕಟ್ಟಿದವರು ಭಾರತೀಯರು’ ಎಂಬ ಹೇಳಿಕೆಗಳನ್ನು ಕೇಳಿ ಗಹಗಹಿಸಿ ನಗುತ್ತಿದ್ದಾರೆ’ ಎಂದು ಅವರು ಲೇವಡಿ ಮಾಡಿದ್ದಾರೆ.

**

‘ಹಳೇ ಪ್ರಶ್ನೆ’

ಸಮ್ಮೇಳನದಲ್ಲಿ ನಡೆದ ಸಂವಾದದ ವೇಳೆ,  ‘ನಿಮ್ಮ ಮದುವೆ ಯಾವಾಗ’ ಎಂದು ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಅವರು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದರು.

‘ಇದು ತುಂಬಾ ಹಳೆಯ ಪ್ರಶ್ನೆ. ನಾನು ಹಣೆಬರಹವನ್ನು ನಂಬುವವನು. ಮದುವೆ ಯಾವಾಗ ಆಗಬೇಕೋ ಆಗ ಆಗುತ್ತದೆ’ ಎಂದು ರಾಹುಲ್ ಉತ್ತರಿಸಿದರು.

**

ಮೋದಿ ಅವರದ್ದು 56 ಇಂಚಿನ ಎದೆ. ಆದರೆ ಹೃದಯ ತುಂಬಾ ಚಿಕ್ಕದು. ಸರ್ಕಾರ ಜನರನ್ನು ನಂಬುತ್ತಿಲ್ಲ. ಹೀಗಾಗಿ ಜನರೂ ಸರ್ಕಾರವನ್ನು ನಂಬುತ್ತಿಲ್ಲ
-ರಾಹುಲ್ ಗಾಂಧಿ, ಎಐಸಿಸಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.