ADVERTISEMENT

ಆರ್ಥಿಕ ಪ್ರಗತಿ ತಡೆಯಲು ಸಂಚು

ಮುಂಬೈ ಸರಣಿ ಸ್ಫೋಟದಲ್ಲಿ ಪಾಕ್ ಕೈವಾಡ: ಶಿಂಧೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST
ಆರ್ಥಿಕ ಪ್ರಗತಿ ತಡೆಯಲು ಸಂಚು
ಆರ್ಥಿಕ ಪ್ರಗತಿ ತಡೆಯಲು ಸಂಚು   

ನವದೆಹಲಿ (ಪಿಟಿಐ): ಭಾರತದ ಆರ್ಥಿಕ ಪ್ರಗತಿಯನ್ನು ತಡೆಯುವ ಉದ್ದೇಶದಿಂದ 1993ರಲ್ಲಿ ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲಾಗಿತ್ತು. ಇದಕ್ಕೆ ಕಾರಣನಾದ ದಾವೂದ್ ಇಬ್ರಾಹಿಂ ಸೇರಿದಂತೆ ಎಲ್ಲರನ್ನು ವಶಕ್ಕೆ ಪಡೆದು ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದರು.

`ನಕಲಿ ಭಾರತೀಯ ನೋಟುಗಳನ್ನು ಮುದ್ರಿಸಿ ಭಾರತದ ಆರ್ಥಿಕತೆಯನ್ನು ಶಕ್ತಿಹೀನಗೊಳಿಸಲು ಪಾಕಿಸ್ತಾನ ಈಗಲೂ ಪ್ರಯತ್ನಿಸುತ್ತಿದೆ' ಎಂದೂ ಅವರು ನೆರೆಯ ರಾಷ್ಟ್ರದ ವಿರುದ್ಧ ಆರೋಪ ಮಾಡಿದರು.`1991ರಲ್ಲಿ ಆರ್ಥಿಕ ಸುಧಾರಣೆಗೆ ಭಾರತ ಕ್ರಮ ತೆಗೆದುಕೊಂಡಿತ್ತು. ಅದರಂತೆ ತೀವ್ರಗತಿಯಲ್ಲಿ ಪ್ರಗತಿ ಕೂಡ ಕಂಡಿತ್ತು. ಆದರೆ, ನಮ್ಮ ಅಭಿವೃದ್ಧಿ ಪಾಕ್‌ಗೆ ಬೇಕಾಗಿರಲಿಲ್ಲ. ಹೀಗಾಗಿಯೇ ಅದು ಕುತಂತ್ರದಿಂದ ಮುಂಬೈನಲ್ಲಿ 13 ಸರಣಿ ಬಾಂಬ್ ಸ್ಫೋಟ ನಡೆಯುವಂತೆ ನೋಡಿಕೊಂಡಿತ್ತು' ಎಂದು ಟಿ.ವಿ ಟುಡೇ ಗ್ರೂಪ್ ಆಯೋಜಿಸಿದ್ದ `ಅಜೆಂಡಾ ಆಜ್ ತಕ್' ಕಾರ್ಯಕ್ರಮದಲ್ಲಿ ಹೇಳಿದರು.

1993ರ ಘಟನೆಯ ಪ್ರಮುಖ ಸೂತ್ರಧಾರ ದಾವೂದ್ ಇಬ್ರಾಹಿಂ ಸೇರಿದಂತೆ ಎಲ್ಲ ಭಯೋತ್ಪಾದಕರನ್ನು ಭಾರತಕ್ಕೆ ಕರೆತಂದು ಅವರ ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ಅವರು ತಿಳಿಸಿದರು.`ಕೇವಲ ದಾವೂದ್ ಮಾತ್ರವಲ್ಲ. ಪಾಕಿಸ್ತಾನದಲ್ಲಿ ಅಡಗಿಕೊಂಡಿರುವ ಉಗ್ರರನ್ನು ಭಾರತಕ್ಕೆ ಕರೆತಂದು ವಿಚಾರಣೆ ನಡೆಸಲಾಗುವುದು. ಈ ಬಗ್ಗೆ ಕೆಲ ಅಂತರರಾಷ್ಟ್ರೀಯ ಸಂಘಟನೆಗಳ ಜತೆ ಸೇರಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ' ಎಂದು ಅವರು ಹೇಳಿದರು.

ಮುಂಬೈ ಸರಣಿ ಸ್ಫೋಟದಲ್ಲಿ ಶಾಮಿಲಾದವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಒದಗಿಸಿದ್ದರೂ ಕೂಡ ಪಾಕ್ ಕ್ರಮ ಕೈಗೊಂಡಿಲ್ಲ ಎಂದು ಕಳೆದ ತಿಂಗಳು ರೋಮ್‌ನಲ್ಲಿ ನಡೆದ ಇಂಟರ್‌ಪೋಲ್ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿರುವುದಾಗಿ ಶಿಂಧೆ ತಿಳಿಸಿದರು.ದೇಶದ ಆರ್ಥಿಕ ಭದ್ರತೆ ಎಲ್ಲಕ್ಕಿಂತ ಮುಖ್ಯವಾದದ್ದು. ಅದರ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. 2008ರ ಮುಂಬೈ ದಾಳಿ ಬಳಿಕ ಬೇಹುಗಾರಿಕೆ ಇಲಾಖೆಯನ್ನು ಬಲಪಡಿಸಲಾಗಿದೆ. ಭಯೋತ್ಪಾದಕರನ್ನು ಮಟ್ಟಹಾಕಲು ಸದೃಢರಾಗಿದ್ದೇವೆ' ಎಂದು ಅವರು ಹೇಳಿದರು.

`ಗಡಿಯಲ್ಲಿ ಪಹರೆ ಹೆಚ್ಚಿಸಿ ಉಗ್ರರ ಉಪಟಳವನ್ನು ನಿಯಂತ್ರಿಸಲಾಗಿದೆ. ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನಲ್ಲಿ 12 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದೆ. ಮುಂದಿನ ಐದು ವರ್ಷಗಳಲ್ಲಿ ಮತ್ತೆ 5 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ' ಎಂದು ಅವರು ತಿಳಿಸಿದರು.

`ಕ್ಷಮಾದಾನ ಅರ್ಜಿ ಪರಿಶೀಲನೆ'
ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿದ ಬಳಿಕ  ಗಲ್ಲು ಶಿಕ್ಷೆಗೆ ಗುರಿಯಾಗಿರುವ ಉಗ್ರ ಅಫ್ಜಲ್ ಗುರುವಿನ ಕ್ಷಮಾದಾನ ಅರ್ಜಿಯನ್ನು ಪರಿಶೀಲಿಸುವುದಾಗಿ ಸುಶೀಲ್ ಕುಮಾರ್ ಶಿಂಧೆ ತಿಳಿಸಿದರು.ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಈ ಕುರಿತ ಅರ್ಜಿಯನ್ನು ಪರಿಶೀಲಿಸಿ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದಾರೆ. ಸದ್ಯ ಈ ಕಡತ ಗೃಹ ಇಲಾಖೆಯ ಬಳಿ ಇದೆ ಎಂದು ಹೇಳಿದರು.`ಸಂಸತ್ತಿನ ಅಧಿವೇಶನ ಪೂರ್ಣಗೊಂಡ ಬಳಿಕ ಕ್ಷಮಾದಾನದ ಕಡತವನ್ನು ತರಿಸಿಕೊಂಡು ವಿಸ್ತೃತವಾಗಿ ಪರಿಶೀಲಿಸುತ್ತೇನೆ' ಎಂದು ಅವರು ಪ್ರತಿಕ್ರಿಯಿಸಿದರು.ಸಂಸತ್ತಿನ ಚಳಿಗಾಲದ ಅಧಿವೇಶನದ ಡಿಸೆಂಬರ್ 20ರಂದು ಮುಗಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.