ADVERTISEMENT

ಆರ್‌ಟಿಐ: ತಿದ್ದುಪಡಿಗೆ ಮಸೂದೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:59 IST
Last Updated 19 ಜುಲೈ 2013, 19:59 IST

ನವದೆಹಲಿ (ಪಿಟಿಐ): ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ರಾಜಕೀಯ ಪಕ್ಷಗಳನ್ನು ತರುವ ಕೇಂದ್ರೀಯ ಮಾಹಿತಿ ಆಯೋಗದ ಆದೇಶವನ್ನು ಅನೂರ್ಜಿತಗೊಳಿಸುವ ಪ್ರಯತ್ನದ ಅಂಗವಾಗಿ, ಕಾಯ್ದೆ ತಿದ್ದುಪಡಿಗೆ ಮಸೂದೆಯೊಂದನ್ನು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಈ ಬಗ್ಗೆ ಸುಗ್ರೀವಾಜ್ಞೆ ತರಲು ಕಾನೂನು ಸಚಿವಾಲಯ ಸಿದ್ಧತೆ ನಡೆಸಿತ್ತು. ಆದರೆ ಮಳೆಗಾಲದ ಅಧಿವೇಶನ ದಿನ ನಿಗದಿ ಮಾಡಿದ್ದು ಹಾಗೂ ಹಲವು ಪಕ್ಷಗಳು ಸುಗ್ರೀವಾಜ್ಞೆಗೆ ಬೆಂಬಲ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಮಸೂದೆ ಮಂಡಿಸಲು ನಿರ್ಧರಿಸಲಾಗಿದೆ.

ಎಲ್ಲ ರಾಜಕೀಯ ಪಕ್ಷಗಳ ಜತೆ ಸರ್ಕಾರ ಈಗಾಗಲೇ ಈ ಕುರಿತು ಮಾತುಕತೆ ನಡೆಸಿದೆ. ತಾವು ಸುಗ್ರೀವಾಜ್ಞೆಯನ್ನು ಬೆಂಬಲಿಸುವುದಿಲ್ಲ ಎಂದು ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳು ಸ್ಪಷ್ಟಪಡಿಸಿದ್ದು, ಮಸೂದೆ ರೂಪದಲ್ಲಿ ತರುವ ತಿದ್ದುಪಡಿಯನ್ನು ಬೆಂಬಲಿಸುವುದಾಗಿ ಪ್ರಕಟಿಸಿವೆ.

ರಾಜಕೀಯ ವಿರೋಧಿಗಳು ದುರುದ್ದೇಶಕ್ಕೆ ಈ ಕಾಯ್ದೆಯನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಅನೇಕ ರಾಜಕೀಯ ಪಕ್ಷಗಳು ಕಳವಳ ವ್ಯಕ್ತಪಡಿಸಿದ್ದು, ಕಾಯ್ದೆ ವ್ಯಾಪ್ತಿಗೆ ರಾಜಕೀಯ ಪಕ್ಷಗಳನ್ನು ತರುವುದು ಆ ಪಕ್ಷಗಳ ಆಂತರಿಕ ಕಾರ್ಯನಿರ್ವಹಣೆಗೆ ಅಡ್ಡಿ ಉಂಟು ಮಾಡುತ್ತದೆ ಎಂದೂ ಹೇಳಿವೆ.

ರಾಜಕೀಯ ಪಕ್ಷಗಳ ಹಣಕಾಸಿನ ವ್ಯವಸ್ಥೆ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆ ಹಾಗೂ ಆದಾಯ ತೆರಿಗೆ ಕಾಯ್ದೆ ಸಮರ್ಥವಾಗಿವೆ ಎಂದು ರಾಜಕೀಯ ಪಕ್ಷಗಳು ಪ್ರತಿಪಾದಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.