ADVERTISEMENT

ಆಹಾರದ ಕೊರತೆಯಿಲ್ಲ: ಪವಾರ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST
ಆಹಾರದ ಕೊರತೆಯಿಲ್ಲ: ಪವಾರ್
ಆಹಾರದ ಕೊರತೆಯಿಲ್ಲ: ಪವಾರ್   

ನವದೆಹಲಿ (ಪಿಟಿಐ): `ದೇಶದ ಗೋದಾಮುಗಳಲ್ಲಿ 82 ದಶಲಕ್ಷ ಟನ್ ಅಕ್ಕಿ ಮತ್ತು ಗೋಧಿ ದಾಸ್ತಾನು ಇರುವುದರಿಂದ ಆಹಾರ ಅಭಾವದ ಸಮಸ್ಯೆ ಉದ್ಭವಿಸುವ ಪ್ರಶ್ನೆಯೇ ಇಲ್ಲ~ ಎಂದ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.

ಮುಂಗಾರು ವಿಳಂಬದಿಂದ ಕೃಷಿ ಕ್ಷೇತ್ರದಲ್ಲುಂಟಾಗುವ ಪರಿಣಾಮಗಳ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡುವಾಗ ಈ ವಿಷಯ ತಿಳಿಸಿದ ಅವರು, ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯಗಳು ಉತ್ಪಾದನೆಯಾಗಿದ್ದರಿಂದ, ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಿದೆ.

ವಾಡಿಕೆಯಂತೆ ಜುಲೈ 1ರವರೆಗೆ 33 ದಶಲಕ್ಷ ಟನ್ ಆಹಾರ ಧಾನ್ಯಗಳು ದಾಸ್ತಾನಾಗಿರುತ್ತವೆ. ಆದರೆ ಈ ವರ್ಷ 82.3 ದಶಲಕ್ಷ ಟನ್ ಆಹಾರ ದಾಸ್ತಾನಾಗಿದೆ~ ಎಂದು ಪವಾರ್ ಮಾಹಿತಿ ನೀಡಿದ್ದಾರೆ.

`ಒಂದು ವೇಳೆ ಮುಂಗಾರು ತಡವಾಗಿದ್ದರಿಂದ ಆಹಾರ ಧಾನ್ಯ ಉತ್ಪಾದನೆ ಕೊರತೆ ಕಂಡು ಬಂದಲ್ಲಿ ಸರ್ಕಾರ ಹೆಚ್ಚುವರಿ ಆಹಾರ ಧಾನ್ಯಗಳನ್ನು ಪೂರೈಸಲು ಸಿದ್ಧವಿದೆ.  ಸೂಕ್ತ ಸಮಯದಲ್ಲಿ ಉತ್ತಮ ಯೋಜನೆಗಳ ಮೂಲಕ ಮುಕ್ತ ಮಾರುಕಟ್ಟೆಗೂ ಆಹಾರ ಧಾನ್ಯಗಳನ್ನು ಪೂರೈಸಲು ಸಿದ್ಧವಿರುವುದಾಗಿ ಪವಾರ್ ತಿಳಿಸಿದ್ದಾರೆ.

ಜುಲೈ 2ರವರೆಗೆ ಮುಂಗಾರು ಮಳೆ ಸರಾಸರಿ ಶೇ 31ರಷ್ಟು ಕಡಿಮೆಯಾಗಿದೆ. ಇದರಿಂದ ಜೋಳ, ಬಾಜ್ರ ಸಜ್ಜೆ ಮತ್ತು ಮುಸುಕಿನ ಜೋಳದಂತಹ ಧಾನ್ಯಗಳ ಬಿತ್ತನೆಗೆ ತೊಂದರೆಯಾಗುತ್ತದೆ. ಆದರೆ ಬತ್ತ ಬೆಳೆಗಾರರು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.