ADVERTISEMENT

ಆಹಾರ ಭದ್ರತಾ ಮಸೂದೆ ಯಶಸ್ಸು: ಶಂಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:30 IST
Last Updated 8 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಮಸೂದೆಯ ಯಶಸ್ಸಿನ ಕುರಿತು ಸ್ವತಃ ಕೃಷಿ ಸಚಿವ ಶರದ್ ಪವಾರ್ ಅನುಮಾನ ವ್ಯಕ್ತಪಡಿಸಿದ ಪ್ರಸಂಗ ಬುಧವಾರ ನಡೆದಿದೆ.

ಸಾರ್ವಜನಿಕ ಪಡಿತರ ವ್ಯವಸ್ಥೆ ಹಾಗೂ ದಾಸ್ತಾನು ಕುರಿತು ದೆಹಲಿಯಲ್ಲಿ ನಡೆದ ವಿವಿಧ ರಾಜ್ಯಗಳ ಆಹಾರ ಮತ್ತು ಕೃಷಿ ಸಚಿವರ ಸಮಾವೇಶವನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಪವಾರ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಿರುವ ಪಡಿತರ ವ್ಯವಸ್ಥೆಯ (ಪಿಡಿಎಸ್) ಮೂಲಕ ಆಹಾರ ಭದ್ರತಾ ಮಸೂದೆಯ ಆಶಯಗಳನ್ನು ಪ್ರಾಮಾಣಿಕವಾಗಿ ಈಡೇರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಮಸೂದೆಯ ಗುರಿಯಂತೆ ದೇಶದ ಎಲ್ಲರಿಗೂ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಪೂರೈಸಬೇಕಾದರೆ `ಪಿಡಿಎಸ್~ ಅನ್ನು ಆಮೂಲಾಗ್ರವಾಗಿ ಬದಲಿಸಬೇಕಿದೆ ಎಂದು ಶರದ್ ಪವಾರ್ ಅವರು ಹೇಳಿದರು.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಒತ್ತಾಸೆಯಂತೆ ಸಂಸತ್ತಿನಲ್ಲಿ ಮಂಡಿಸಲಾಗಿರುವ ಆಹಾರ ಭದ್ರತಾ ಮಸೂದೆಯನ್ನು  ಪ್ರಸ್ತುತ ಸಂಸತ್ತಿನ ಸ್ಥಾಯಿ ಸಮಿತಿಯ (ಆಹಾರ) ಮುಂದೆ ಪರಿಶೀಲನೆಗಾಗಿ ಇಡಲಾಗಿದೆ.

ಪ್ರಣವ್ ಚಿಂತೆ...
ಇದೇ ಸಭೆಯಲ್ಲಿ ಮಾತನಾಡಿದ ಪ್ರಣವ್ ಮುಖರ್ಜಿ,ಆಹಾರ ಮಸೂದೆ ಅನುಷ್ಠಾನಗೊಳಿಸುವ ದೈತ್ಯ ಜವಾಬ್ದಾರಿಯನ್ನು ಸರ್ಕಾರ ಹೊತ್ತಿದೆ. ಹಣಕಾಸು ಸಚಿವನಾಗಿ ಸರ್ಕಾರ ಭರಿಸಬೇಕಿರುವ ಅಗಾಧ ಸಬ್ಸಿಡಿ ವೆಚ್ಚದ ಬಗ್ಗೆ ಯೋಚಿಸಿದಾಗಲೆಲ್ಲ ನನ್ನ ನಿದ್ದೆ ಹಾರಿಹೋಗುತ್ತದೆ ಎಂದರು.

ದೇಶದ ಶೇ 63.5ರಷ್ಟು ಜನರಿಗೆ ಸಬ್ಸಿಡಿ ದರದಲ್ಲಿ ಆಹಾರ ಒದಗಿಸುವ ಈ ಕಾಯ್ದೆಯಿಂದ ದೇಶದ ಬೊಕ್ಕಸಕ್ಕೆ ರೂ. 2.34 ಲಕ್ಷ ಕೋಟಿ ಹೊರೆಯಾಗುವ ನಿರೀಕ್ಷೆಯಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT