ADVERTISEMENT

ಆಹಾರ ಭದ್ರತೆ ಮಸೂದೆಯಲ್ಲಿ ಹೊಸ ಅಂಶ ಸೇರ್ಪಡೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತೆ ಮಸೂದೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಶೇಕಡಾವಾರು ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಲು ಯುಪಿಎ ಸರ್ಕಾರ ನಿರ್ಧರಿಸಿದೆ.ಪ್ರಧಾನಿ ಅವರ ಕಚೇರಿಯಲ್ಲಿ ಹಣಕಾಸು ಮತ್ತು ಆಹಾರ ಹಾಗೂ ಗ್ರಾಹಕರ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಸಭೆ ನಡೆಸಿ ಶೇಕಡಾ 64ರಷ್ಟಿದ್ದ ಫಲಾನುಭವಿಗಳ ಸಮಖ್ಯೆಯನ್ನು ಶೇಕಡಾ 70ಕ್ಕೆ ಏರಿಸಲು ತಿರ್ಮಾನಿಸಲಾಗಿದೆ.

 ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿತರಿಸಬೇಕಾದ ಆಹಾರಧಾನ್ಯಗಳ ಪ್ರಮಾಣವನ್ನು ನಿರ್ಧರಿಸುವ ವಿವೇಚನಾ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಕೊಡಲು ತೀರ್ಮಾನಿಸಲಾಗಿದೆ.ಈ ಮೊದಲಿನ ನಿರ್ಧಾರದಂತೆ ಶೇಕಡಾ 64ರಷ್ಟು ಫಲಾನುಭವಿಗಳಿಗೆ ಕಡಿಮೆ ಬೆಲೆಯಲ್ಲಿ ಆಹಾರಧಾನ್ಯ ವಿತರಿಸಲು ಪ್ರತಿ ವರ್ಷ 90 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು.

ಈಗ ಈ ಮೊತ್ತ 1.20 ಲಕ್ಷ ಕೋಟಿಗೆ ಏರಲಿದೆ. ಸಬ್ಸಿಡಿ ಮೊತ್ತ ಅಗಾಧವಾಗಿ ಏರಿಕೆಯಾಗಲಿದ್ದರೂ ಹಣಕಾಸು ಇಲಾಖೆ ಅದಕ್ಕೆ ಒಪ್ಪಿಗೆ ನೀಡಿದೆ ಎನ್ನಲಾಗಿದೆ.ಹೊಸ ಪ್ರಸ್ತಾವದ ಪ್ರಕಾರ ಯೋಜನೆ ಜಾರಿಗೆ ಅಗತ್ಯವಾದ ಶೇ. 67ರಿಂದ 70ರಷ್ಟು ಆಹಾರಧಾನ್ಯಗಳನ್ನು ಕೇಂದ್ರ ಸರ್ಕಾರ ನೀಡಲಿದೆ. ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ಹಿಮಾಚಲಪ್ರದೇಶ, ಉತ್ತರಾಖಂಡ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್, ನಿಕೋಬಾರ್, ಲಕ್ಷದ್ವೀಪಕ್ಕೆ ಶೇಕಡಾ 90 ರಷ್ಟು ಆಹಾರಧಾನ್ಯಗಳನ್ನು ಕೇಂದ್ರವೇ ನೀಡಲಿದೆ.

ಆಹಾರ, ಗ್ರಾಹಕರ ವ್ಯವಹಾರ ಮತ್ತು ಸಾರ್ವಜನಿಕ ವಿತರಣೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಎದುರಿಗೆ ಇರುವ ಮಸೂದೆಯು ಕಾಯ್ದೆಯಾಗಿ ಜಾರಿಯಾದ ಮೇಲೆ ಗ್ರಾಮೀಣ ಪ್ರದೇಶದ ಶೇಕಡಾ 75ರಷ್ಟು ಮತ್ತು ಪಟ್ಟಣ ಪ್ರದೇಶದ ಶೇಕಡಾ 50ರಷ್ಟು ಜನತೆಗೆ ಪ್ರಯೋಜನವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.