ADVERTISEMENT

ಇಂದು ಸಂಪುಟ ಪುನರ್‌ರಚನೆ?

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 19:30 IST
Last Updated 18 ಜನವರಿ 2011, 19:30 IST

ನವದೆಹಲಿ (ಪಿಟಿಐ): ಯುಪಿಎ 2ನೇ ಅವಧಿಯ ಮೊತ್ತಮೊದಲ ಮಂತ್ರಿಮಂಡಲ ಪುನರ್‌ರಚನೆ ಬುಧವಾರ ಸಂಜೆ 5 ಗಂಟೆಗೆ ನಡೆಯುವ ಸಾಧ್ಯತೆ ಇದ್ದು, ಸಲ್ಮಾನ್ ಖುರ್ಷಿದ್, ಪ್ರಫುಲ್ ಪಟೇಲ್ ಮತ್ತು ಜೈರಾಂ ರಮೇಶ್ ಅವರು ಸಂಪುಟ ದರ್ಜೆಗೇರುವ ಸಂಭವವಿದೆ. ಕರ್ನಾಟಕದ ವೀರಪ್ಪ ಮೊಯಿಲಿ ಅವರು ಕಾನೂನು ಇಲಾಖೆ ಬಿಟ್ಟು ಮಾನವ ಸಂಪನ್ಮೂಲ ಹೊಣೆ ನಿಭಾಯಿಸುವ ಸ್ಥಿತಿ ಉಂಟಾಗಬಹುದು.

ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಬೆಳಿಗ್ಗೆ ಎರಡು ಗಂಟೆಗೂ ಹೆಚ್ಚು ಕಾಲ ಈ ಕುರಿತು ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸಿಂಗ್ ಅವರ ನಿವಾಸದಲ್ಲಿ ನಡೆದ ಈ ಮಾತುಕತೆ ವೇಳೆ ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಅವರೂ ಇದ್ದರು. ನಂತರ ಸಂಜೆ,  ನಾಯಕಪ್ರಣವ್ ಮುಖರ್ಜಿ  ಅವರು  ಸೋನಿಯಾ ಜತೆ ಚರ್ಚಿಸಿದರು.

ಪ್ರಮುಖ ನಾಲ್ಕು ಖಾತೆಗಳಾದ ಹಣಕಾಸು, ಗೃಹ, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಕ್ಷೀಣ. ಮೂರು ಖಾತೆಗಳನ್ನು ಹೊತ್ತಿರುವ ಶರದ್ ಪವಾರ್ ಅವರನ್ನು ಗ್ರಾಹಕ ವ್ಯವಹಾರಗಳ ಹೊಣೆಯಿಂದ ಹಾಗೂ ಕಪಿಲ್ ಸಿಬಲ್ ಅವರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೊಣೆಯಿಂದ ಮುಕ್ತಗೊಳಿಸುವ ಸಾಧ್ಯತೆ ಇದೆ.

ADVERTISEMENT

ಆದರೆ ಸಿಬಲ್ ಅವರು ಮಾನವ ಸಂಪನ್ಮೂಲ ಸಚಿವರಾಗಿ ಮುಂದುವರಿಯುತ್ತಾರೋ ಅಥವಾ ದೂರಸಂಪರ್ಕ ಸಚಿವರಾಗಿರುತ್ತಾರೋ ಎಂಬುದು ಕುತೂಹಲ ಮೂಡಿಸಿದೆ. ಮಾನವ ಸಂಪನ್ಮೂಲ ಹೊಣೆ ಹೊತ್ತ ನಂತರ ಹಲವಾರು ಸುಧಾರಣೆಗೆ ಚಾಲನೆ ನೀಡಿರುವ ಸಿಬಲ್ ಅವರನ್ನು ಅದೇ ಖಾತೆಯಲ್ಲಿ ಮುಂದುವರಿಸಲಾಗುತ್ತದೆ ಎಂದು ಕೆಲವರು ಪ್ರಬಲವಾಗಿ ಹೇಳುತ್ತಿದ್ದಾರೆ. ಮತ್ತೆ ಕೆಲವರ ಪ್ರಕಾರ, ದೂರಸಂಪರ್ಕ ಸಚಿವರಾಗಿಯೇ ಅವರು ಮುಂದುವರಿಯಲಿದ್ದಾರೆ.

ಒಂದೊಮ್ಮೆ ಸಲ್ಮಾನ್ ಖುರ್ಷಿದ್ ಅವರಿಗೆ ಕಾನೂನು ಸಚಿವ ಸ್ಥಾನ ನೀಡಿದ್ದೇ ಆದರೆ ಆ ಸ್ಥಾನದಿಂದ ತೆರವಾಗುವ ವೀರಪ್ಪ ಮೊಯಿಲಿ ಅವರು ಮಾನವ ಸಂಪನ್ಮೂಲ ಖಾತೆ ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಸಲ್ಮಾನ್ ಖುರ್ಷಿದ್‌ರಿಂದ ತೆರವಾಗುವ ಅಲ್ಪಸಂಖ್ಯಾತರ ವ್ಯವಹಾರಗಳ ರಾಜ್ಯ ಸಚಿವ ಸ್ಥಾನವನ್ನು ರಾಜ್ಯಸಭೆ ಉಪಸಭಾಪತಿ ಕೆ.ರೆಹಮಾನ್ ಖಾನ್ ಅವರಿಗೆ ವಹಿಸುವ ಸಾಧ್ಯತೆ ಇದೆ.
ಪ್ರಸ್ತುತ ವಾಣಿಜ್ಯ ಖಾತೆ ರಾಜ್ಯ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧ್ಯ ಅವರು ಶಶಿ ತರೂರ್ ರಾಜೀನಾಮೆಯಿಂದ ಖಾಲಿಯಾಗಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಸ್ಥಾನಕ್ಕೆ ವರ್ಗಾವಣೆಯಾಗುವ ವದಂತಿ ಇದೆ.

ಕಾಂಗ್ರೆಸ್ಸಿನ ರಾಜೀವ್ ಶುಕ್ಲಾ, ತೃಣಮೂಲದ ಸುದೀಪ್ ಬಂದೋಪಾಧ್ಯಾಯ ಹಾಗೂ ಡಿಎಂಕೆಯ ಟಿ.ಆರ್.ಬಾಲು ಅಥವಾ ಟಿ.ಕೆ.ಎಸ್.ಇಳಂಗೋವನ್ ಅವರು ಸಂಪುಟ ಸೇರುವ ನಿರೀಕ್ಷೆ ಇದೆ. ಬಾಲು ಅವರು ಪ್ರಧಾನಿ ಅವರನ್ನು ಬೆಳಿಗ್ಗೆ ಭೇಟಿಯಾಗಿದ್ದರು.

ಕ್ರೀಡಾ ಖಾತೆ ಸಚಿವ ಎಂ.ಎಸ್.ಗಿಲ್, ಉಕ್ಕು ಖಾತೆ ಸಚಿವ ವೀರಭದ್ರ ಸಿಂಗ್, ಗಣಿ ಸಚಿವ ಬಿ.ಕೆ.ಹಂಡಿಕ್, ಗ್ರಾಮೀಣಾಭಿವೃದ್ಧಿ ಸಚಿವ ಸಿ.ಪಿ.ಜೋಷಿ ಮತ್ತು ಭಾರಿ ಕೈಗಾರಿಕಾ ಸಚಿವ ವಿಲಾಸರಾವ್ ದೇಶಮುಖ್ ಅವರು ಸಂಪುಟ ಕುರ್ಚಿ ತೆರವು ಮಾಡಬೇಕಾಗಿ ಬರಬಹುದು.

ಈ ಪೈಕಿ ದೇಶಮುಖ್ ಮತ್ತು ಜೋಷಿ ಅವರನ್ನು ಪಕ್ಷದ ಕಾರ್ಯಕ್ಕೆ ನಿಯೋಜಿಸಲಾಗುತ್ತದೆಂಬ ಮಾತುಗಳು ಕೇಳಿಬಂದಿವೆ. ಸಂಪುಟ ಮರುರಚನೆಯಾಗುತ್ತಿದ್ದಂತೆ ಎಐಸಿಸಿ ಪದಾಧಿಕಾರಿಗಳ ನೇಮಕವೂ ಆಗಲಿದ್ದು ಈ ಇಬ್ಬರ ಸೇರ್ಪಡೆ ಬಹುತೇಕ ಖಚಿತ ಎನ್ನಲಾಗಿದೆ.

ಕಾಂಗ್ರೆಸ್ ನಾಯಕರಾದ ವೀರಭದ್ರ ಸಿಂಗ್ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಕಾಂತಿಲಾಲ್ ಭೂರಿಯ ಅವರು ಪಕ್ಷದ ಅಧ್ಯಕ್ಷೆಯನ್ನು ಬೆಳಿಗ್ಗೆ ಭೇಟಿಯಾಗಿದ್ದರು. ಪೃಥ್ವಿರಾಜ್ ಚವ್ಹಾಣ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಪ್ರಧಾನಿ ಸಚಿವಾಲಯದ ರಾಜ್ಯ ಸಚಿವ ಸ್ಥಾನಕ್ಕೆ ಮನೀಶ್ ತಿವಾರಿ, ಅಜಯ್ ಮಕೇನ್ ಅವರ ಹೆಸರುಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.