ADVERTISEMENT

ಇದೇ 10ರಂದು ನ್ಯಾಯಾಲಯದ ಆದೇಶ

ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ನವದೆಹಲಿ (ಐಎಎನ್‌ಎಸ್): ದೆಹಲಿಯಲ್ಲಿ ನಡೆದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 10ರಂದು ಆದೇಶ ಪ್ರಕಟಿಸುವುದಾಗಿ ಇಲ್ಲಿನ ತ್ವರಿತ ಗತಿ ನ್ಯಾಯಾಲಯ ತಿಳಿಸಿದೆ.

ಆರೋಪಿಗಳ ಪರ ವಕೀಲರು ವಾದ ಪೂರ್ಣಗೊಳಿಸಿದ ಬಳಿಕ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಯೋಗೇಶ್ ಖನ್ನಾ ಅವರು ಈ ಸಂಬಂಧದ ಆದೇಶವನ್ನು ಕಾಯ್ದಿರಿಸಿದ್ದಾರೆ. ಸರ್ಕಾರಿ ವಕೀಲರು ಈಗಾಗಲೇ ತಮ್ಮ ವಾದ ಮುಗಿಸಿದ್ದಾರೆ.

2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಚಲಿಸುತ್ತಿದ್ದ ಬಸ್‌ನಲ್ಲೇ ಬಾಲಾರೋಪಿ ಸೇರಿದಂತೆ ಆರು ಜನ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ವಿದ್ಯಾರ್ಥಿನಿಯ ಗೆಳೆಯನ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಸಿಂಗಪುರದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ಆಕೆ ಬದುಕುಳಿದಿರಲಿಲ್ಲ.

ಆರು ಜನ ಆರೋಪಿಗಳ ಪೈಕಿ ಒಬ್ಬ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. 18 ವರ್ಷದೊಳಗಿನ ಆರೋಪಿಯನ್ನು ಮೂರು ವರ್ಷ ಬಾಲ ಮಂದಿರದಲ್ಲಿ ಇರಿಸಬೇಕೆಂದು ಬಾಲ ನ್ಯಾಯ ಮಂಡಳಿ ಆಗಸ್ಟ್ 31ರಂದು ಶಿಕ್ಷೆ ಪ್ರಮಾಣ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.