ADVERTISEMENT

ಇರಾನ್ ಅಣ್ವಸ್ತ್ರ ಕಾರ್ಯಕ್ರಮ ವಿವಾದ; ಮಧ್ಯಸ್ಥಿಕೆ ವಹಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಇರಾನ್ ವಿರುದ್ಧ ಹೊಸ ದಿಗ್ಬಂಧನಗಳನ್ನು ವಿಧಿಸಿರುವ ಐರೋಪ್ಯ ಒಕ್ಕೂಟವು, ಟೆಹರಾನ್‌ನೊಂದಿಗೆ ಅಣ್ವಸ್ತ್ರ ಕಾರ್ಯಕ್ರಮ ನಿಲ್ಲಿಸುವ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಭಾರತವನ್ನು ಕೋರಿದೆ.

`ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮ ವಿವಾದವನ್ನು ಬಗೆಹರಿಸಲು ರಾಜತಾಂತ್ರಿಕ ಸಮಾಲೋಚನೆಗೆ ಹೆಚ್ಚಿನ ಅವಕಾಶ ನೀಡಬೇಕು~ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದರೂ, ಐರೋಪ್ಯ ಒಕ್ಕೂಟ ಈ ಬೇಡಿಕೆ ಮುಂದಿಟ್ಟಿದೆ.

`ಇರಾನ್ ಅಣ್ವಸ್ತ್ರ ಕಾರ್ಯಕ್ರಮದ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದು, ಪ್ರಧಾನಿ ಸಿಂಗ್ ಅವರು ಟೆಹರಾನ್‌ನೊಂದಿಗಿನ ಭಾರತದ ಬಾಂಧವ್ಯವನ್ನು ಬಳಸಿ, ಆ ದೇಶವನ್ನು ಸಂಧಾನ ವೇದಿಕೆಗೆ ಕರೆತರಬೇಕು” ಎಂದು ಐರೋಪ್ಯ ಮಂಡಳಿಯ ಅಧ್ಯಕ್ಷ ಹರ್ಮನ್ ವ್ಯಾನ್ ರಾಂಪೈ ಅವರು ಶುಕ್ರವಾರ ಇಲ್ಲಿ ನಡೆದ 12ನೇ ಭಾರತ-ಐರೋಪ್ಯ ಒಕ್ಕೂಟ ಶೃಂಗಸಭೆಯಲ್ಲಿ ಮನವಿ ಮಾಡಿದರು.

ಐರೋಪ್ಯ ಒಕ್ಕೂಟ ಮತ್ತು ಅಮೆರಿಕವು ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದ್ದರ ನಡುವೆಯೂ ಭಾರತವು ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿದೆ. ಇರಾನ್ ಪ್ರಸ್ತುತ ಭಾರತದ ಎರಡನೇ ಬೃಹತ್ ಕಚ್ಚಾ ತೈಲ ಪೂರೈಕೆ ರಾಷ್ಟ್ರವಾಗಿದೆ.

 ಪ್ರಧಾನಿ ಸ್ಪಷ್ಟನೆ: ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಂಗ್, `ಇರಾನ್ ಭಾರತದ ಆಪ್ತ ನೆರೆಯ ದೇಶವಲ್ಲದೆ, ಇಂಧನ ಪೂರೈಕೆಯ ಪ್ರಮುಖ ಮೂಲವಾಗಿದೆ~ ಎಂದು ಬಣ್ಣಿಸಿದರು. `ಇರಾನ್ ಅಣ್ವಸ್ತ್ರ ಕಾರ್ಯಕ್ರಮದಲ್ಲಿ ಕೆಲವು ಸಮಸ್ಯೆಗಳಿದ್ದು, ರಾಜತಾಂತ್ರಿಕತೆಗೆ ಸಾಕಷ್ಟು ಅವಕಾಶ ನೀಡುವ ಮೂಲಕ ಸಮಸ್ಯೆ ಬಗೆಹರಿಸಬೇಕೆಂಬುದು ಭಾರತದ ಪ್ರಾಮಾಣಿಕ ನಂಬಿಕೆ~ ಎಂದು ಅವರು ಹೇಳಿದರು. `ಕೊಲ್ಲಿ ರಾಷ್ಟ್ರಗಳಲ್ಲಿ ಅಪಾರ ಸಂಖ್ಯೆಯ ಭಾರತೀಯರಿದ್ದು, ಆ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸ್ಥಿರತೆ ಸಾಧಿಸಲು ಇದು ನೆರವಾಗುವುದು~ ಎಂದೂ ತಿಳಿಸಿದರು.

ಭಾರತವು ಇರಾನ್‌ನೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಿಕೊಳ್ಳಲು ಯೋಜಿಸಿದ್ದು, ಈ ನಿಟ್ಟಿನಲ್ಲಿ ವ್ಯಾಪಾರ ಅವಕಾಶಗಳನ್ನು ಶೋಧಿಸಲು ತಿಂಗಳಾಂತ್ಯಕ್ಕೆ ಆ ದೇಶಕ್ಕೆ ವಾಣಿಜ್ಯ ನಿಯೋಗವೊಂದನ್ನು ಕಳುಹಿಸಲು ನಿರ್ಧರಿಸಿದೆ. `ಇರಾನ್‌ಗೆ ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ರಫ್ತು ನಿಲ್ಲಿಸಲು ಬಯಸಿದರೆ, ನಾವೇಕೆ ಅದನ್ನು ಅನುಸರಿಸಬೇಕು. ಈ ಅವಕಾಶವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕಿದೆ~ ಎಂದು ಭಾರತದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ವಿವಾದಾತ್ಮಕ ಅಣ್ವಸ್ತ್ರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇರಾನ್ ವಿರುದ್ಧ ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ದಿಗ್ಬಂಧನಗಳನ್ನು ವಿಧಿಸಿರುವುದರಿಂದ ಭಾರತಕ್ಕೆ ಆ ದೇಶದೊಡನೆ ವ್ಯಾಪಾರ ನಡೆಸಲು ವಿಪುಲ ವಾಣಿಜ್ಯ ಅವಕಾಶಗಳು ತೆರೆದಿವೆ ಎಂದು ಹೇಳಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT