ADVERTISEMENT

ಇವಿಎಂ ಯಂತ್ರಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ: ಅಖಿಲೇಶ್ ಯಾದವ್

ಪಿಟಿಐ
Published 29 ಮೇ 2018, 11:39 IST
Last Updated 29 ಮೇ 2018, 11:39 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್   

ಲಖನೌ: ಸಮಾಜವಾದಿ ಪಕ್ಷ(ಎಸ್‌ಪಿ) ಮತ್ತು ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ) ಪಕ್ಷಗಳ ಪ್ರಭಾವಿತ ವಲಯಗಳಲ್ಲೇ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ದೋಷ ಕಾಣಿಸಿಕೊಂಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಪಾಯಕಾರಿ ಮುನ್ಸೂಚನೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಡೆದ ಚುನಾವಣೆಯಲ್ಲಿ ಇವಿಎಂನಿಂದ ತೊಂದರೆಯಾಗಿರುವ ಬಗ್ಗೆ ಈ ವಲಯಗಳಿಂದಲೇ ಹೆಚ್ಚಿನ ದೂರುಗಳು ಬಂದಿವೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಎರಡು ಪಕ್ಷಗಳು ಇವಿಎಂ ಮತಯಂತ್ರಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿರುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ. 

ಸಾಮಾನ್ಯ ಜನರು ಇವಿಎಂ ಮತಯಂತ್ರಗಳ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ. ಇವಿಎಂನಿಂದ ಎದುರಾದ ತೊಂದರೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲಿದೆ ಎಂದು ಹೇಳಿದ್ದಾರೆ.

ADVERTISEMENT

ಭವಿಷ್ಯದಲ್ಲಿ ನಡೆಯುವ ಚುನಾವಣೆಗಳು ಮತಪತ್ರದ ಮೂಲಕವೇ ನಡೆಸಬೇಕು ಎಂದು ಪಕ್ಷಗಳು ಹೊಸ ಬೇಡಿಕೆ ಇಟ್ಟಿವೆ ಎಂದು ಹೇಳಿದ್ದಾರೆ.

ಮತಪತ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲತುಂಬಲಿವೆ ಎಂದಿರುವ ಅಖಿಲೇಶ್, ಈ ಬಗ್ಗೆ ಮೊದಲು ಅನ್ಯ ರಾಜಕೀಯ ಪಕ್ಷಗಳ ಬಳಿ ಚರ್ಚಿಸುತ್ತೇನೆ. ಪತ್ರವನ್ನೂ ಬರೆಯುತ್ತೇನೆ. ಇವರೆಲ್ಲರೂ ಇವಿಂ ವಿರುದ್ಧವಾಗಿ ಒಮ್ಮತ ಸೂಚಿಸಲಿದ್ದಾರೆ. ಇವಿಎಂ ಯಂತ್ರಗಳಿಗಿಂತ ಮತಪತ್ರದ ಮೂಲಕ ನಡೆಯುವ ಚುನಾವಣೆಯಲ್ಲಿ ನಂಬಿಕೆ ಹೆಚ್ಚಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ನಿರ್ಣಯ ಕೈಗೊಳ್ಳಲು ನಡೆಸಿದ ಸಭೆಯಲ್ಲಿ ಕಾಂಗ್ರೆಸ್ ಭಾಗವಹಿಸಿಲ್ಲ. ಆದರೆ ಕಾಂಗ್ರೆಸ್ ಕೂಡ ನಮ್ಮ ನಿರ್ಧಾರವನ್ನು ಬೆಂಬಲಿಸಲಿದೆ. ಎಲ್ಲರೊಂದಿಗೆ ಮಾತನಾಡುವುದು ನನ್ನ ಮೊದಲ ಆದ್ಯತೆಯಾಗಿದ್ದು, ನಂತರ ನಿರ್ಣಯಕ್ಕೆ ಬರಲಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.