ADVERTISEMENT

ಇ-ಮೇಲ್, ಎಸ್‌ಎಂಎಸ್ ಮೂಲಕವೂ ದೂರಿಗೆ ಉತ್ತರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಸಾರ್ವಜನಿಕರು ತಮ್ಮ ಕುಂದು ಕೊರತೆಗಳಿಗೆ ಸಂಬಂಧಿಸಿದ ದೂರುಗಳಿಗೆ ಇನ್ನು ಮುಂದೆ ಇ-ಮೇಲ್ ಹಾಗೂ ಎಸ್‌ಎಂಎಸ್ ಮೂಲಕ ಉತ್ತರ ಪಡೆಯಬಹುದು.

ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವೇ ಇತ್ಯರ್ಥಪಡಿಸಲು ಸರ್ಕಾರವು, ಸಾರ್ವಜನಿಕ ಕುಂದುಕೊರತೆ ಪರಿಹಾರ ಹಾಗೂ ನಿರ್ವಹಣೆಯಲ್ಲಿ (ಸಿಪಿಜಿಆರ್‌ಎಂಎಸ್) `ಸಂಪರ್ಕ ವ್ಯವಸ್ಥೆ~ ಆರಂಭಿಸಿದೆ.

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ ಖಾತೆ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ಗುರುವಾರ ಸಿಪಿಜಿಆರ್‌ಎಂಎಸ್ ಸಚಿವರ ಕಚೇರಿ `ಸಂಪರ್ಕ ವ್ಯವಸ್ಥೆ~ಗೆ ಚಾಲನೆ ನೀಡಿದರು.

ಸ್ಕ್ಯಾನ್ ಮಾಡಿದ ಬಳಿಕ ಅರ್ಜಿಗಳು ಹಾಗೂ ದಾಖಲೆಗಳನ್ನು ಕಂಪ್ಯೂಟರ್‌ನಲ್ಲಿ ಲಗತ್ತಿಸುವ ಸೌಲಭ್ಯ ಈ ವ್ಯವಸ್ಥೆಯಲ್ಲಿ ಇದೆ. `ನಾವು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಂಬಂಧಪಟ್ಟ ಪೋರ್ಟಲ್‌ನಲ್ಲಿ  ಹಾಕುತ್ತೇವೆ ಮತ್ತು ಕುಂದುಕೊರತೆಗಳ ವರ್ಗೀಕರಣ ಮಾಡುತ್ತೇವೆ. ವಿವಿಧ ಸಚಿವರಿಂದ ಪಡೆದ ಉತ್ತರಗಳನ್ನೂ ಇಲ್ಲಿ ಪ್ರಕಟಿಸುತ್ತೇವೆ. ಈ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವೇ ಇತ್ಯರ್ಥ ಪಡಿಸುತ್ತೇವೆ~ ಎಂದು ಸಚಿವರು ನೂತನ ವ್ಯವಸ್ಥೆಯ ಸ್ವರೂಪವನ್ನು ಬಿಚ್ಚಿಟ್ಟರು.

ದೂರುಗಳಿಗೆ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಇದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳ ಇತ್ಯರ್ಥಕ್ಕೆ ಸಂಬಂಧಪಟ್ಟವರು ಏನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು ಮತ್ತು ಇದಕ್ಕೆ ತಮ್ಮ ಪ್ರತಿಕ್ರಿಯೆಯನ್ನೂ ನೀಡಬಹುದು.

2011ರಲ್ಲಿ ಒಟ್ಟು 1,72,487 ದೂರುಗಳನ್ನು ಸ್ವೀಕರಿಸಲಾಗಿದ್ದು, 1,47,028 ಮನವಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.